Top

ಸಾಲಮನ್ನ ಕುರಿತು ಯು ಟರ್ನ್​, ರೈಟ್ ಟರ್ನ್​ ಏನೂ ಇಲ್ಲ: ಕುಮಾರಸ್ವಾಮಿ

ಸಾಲಮನ್ನ ಕುರಿತು ಯು ಟರ್ನ್​ ಇಲ್ಲ, ರೈಟ್ ಟರ್ನ್​ ಇಲ್ಲ. ಸಮಯ ಬೇಕು ಅಷ್ಟೇ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಚಾಮುಂಡಿಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಾಲಮನ್ನ ಮಾಡಲು ನಮ್ಮದು ಸ್ವತಂತ್ರ ಸರಕಾರ ಅಲ್ಲ. ಸಮ್ಮಿಶ್ರ ಸರಕಾರ. ನಾವು ಮಿತ್ರ ಪಕ್ಷವಾದ ಕಾಂಗ್ರೆಸ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಬೇಕಿದೆ ಎಂದರು.

ರೈತರ ಸಾಲ‌ ಮನ್ನಾ ಬಗ್ಗೆ ಗಂಭೀರ ಚಿಂತನೆ ಆರಂಭವಾಗಿದೆ. ರೈತರು ಹಾಗೂ ರೈತ ಮುಖಂಡರು ತಾಳ್ಮೆ‌ ವಹಿಸಬೇಕು. ನಾನು ನೀಡಿದ ವಾಗ್ದಾನಗಳನ್ನು ಈಡೇರಿಸದೆ ಇರುವುದಿಲ್ಲ. ಕುಮಾರಸ್ವಾಮಿ ಜನರ ಮಧ್ಯೆ‌ ಬೆಳೆದವನು, ಅವರಿಗೋಸ್ಕರನೇ ಅಧಿಕಾರಕ್ಕೆ ಬಂದಿರೋದು. ರೈತರ ಪರಿಸ್ಥಿತಿ ಕೇವಲ ಸಾಲ‌ ಮನ್ನಾಕ್ಕೆ ಸೀಮಿತಗೊಳಿಸುವುದಿಲ್ಲ ಎಂದು ಕುಮಾರಸ್ವಾಮಿ ನುಡಿದರು.

ಇವತ್ತಿನ ಪರಿಸ್ಥಿತಿಯಲ್ಲಿ ಸಿಎಂ ಆಗುತ್ತಿರುವುದು ನನಗೆ ಸಂಪೂರ್ಣ ತೃಪ್ತಿ ತಂದಿಲ್ಲ. ಮನಸ್ಸಿನಲ್ಲಿ ಒಂದಷ್ಟು ನೋವು ತುಂಬಿಕೊಂಡೇ ಅಧಿಕಾರ ಸ್ವೀಕರಿಸುತ್ತಿದ್ದೇನೆ. ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕೆಂಬುದು ನನ್ನ ಆಸೆಯಾಗಿತ್ತು. ಇಂದು ಪರಮೆಶ್ವರ್ ಅವರು ನನ್ನೊಂದಿಗೆ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಸಚಿವ ಸಂಪುಟದ ಸದಸ್ಯರ ವಿವರ ಪ್ರಮಾಣವಚನ ನಂತರ ತಿಳಿಯಲಿದೆ ಎಂದು ಅವರು ಹೇಳಿದರು.

ಇಸ್ರೇಲ್ ಮಾದರಿಯ ಕೃಷಿ ನೀತಿ ಸೇರಿದಂತೆ ಹಲವಾರು ಸುಧಾರಿತ ಕೃಷಿ ತರುವ ಆಲೋಚನೆ ಇದೆ. ನನ್ನ ಕಾರ್ಯ ವೈಖರಿ ಎಂದಿನಂತೆಯೇ ಇರುತ್ತದೆ. ಸಮ್ಮಿಶ್ರ ಸರ್ಕಾರದಲ್ಲಿ ಇತಿಮಿತಿಗಳ ನಡುವೆ ಉತ್ತಮ ಆಡಳಿತ ನೀಡುವೆ. ಜನಸಾಮಾನ್ಯರಿಗೆ ಸಿಎಂ ಮನೆ ಬಾಗಿಲು ಸದಾ ತೆರದಿರುತ್ತದೆ. ಜನಸಾಮಾನ್ಯರಿಗೆ‌ ನೇರವಾಗಿ ಸ್ಪಂದಿಸುವುದೇ ನನ್ನ ಉದ್ದೇಶವಾಗಿದೆ. ರೈತ ಮುಖಂಡರು ಜಾತಿ ನೆಲೆಯಲ್ಲಿ ಆಲೋಚನೆ ಮಾಡಬಾರದು ಎಂದು ಮನವಿ ಮಾಡಿದರು.

Next Story

RELATED STORIES