Top

ಇದು ಕಾಳಿ ನದಿ ನೀರಿನ ಹೋರಾಟದ ಕಥೆ

ಇದು ಕಾಳಿ ನದಿ ನೀರಿನ ಹೋರಾಟದ ಕಥೆ
X

ಧಾರವಾಡ : ಜಿಲ್ಲೆಯಲ್ಲಿ ಮಹಾದಾಯಿ ನದಿ ನೀರಿಗಾಗಿ ನಡೆದಿರೋ ಹೋರಾಟ ಆರಂಭಗೊಂಡು ಸಾವಿರ ದಿನಗಳನ್ನು ಪೂರೈಸಿದೆ. ಒಂದು ಕಡೆ ಕೇಂದ್ರ ಸರಕಾರದ ಬೇಜವಾಬ್ದಾರಿ ವರ್ತನೆ, ಇನ್ನೊಂದು ಕಡೆ ರಾಜ್ಯ ಸರಕಾರದ ನಿರ್ಲಕ್ಷ ಧೋರಣೆಯಿಂದಾಗಿ ಈ ಯೋಜನೆ ಗಗನ ಕುಸುಮವಾಗಿದೆ. ಇದೇ ವೇಳೆ ನಮ್ಮ ರಾಜ್ಯದ್ದೇ ನದಿಯೊಂದರ ನೀರನ್ನು ಧಾರವಾಡ ಜಿಲ್ಲೆಗೆ ಬಳಸಿಕೊಳ್ಳೋ ಬಗ್ಗೆ ಹಲವಾರು ವರ್ಷಗಳಿಂದ ನಡೆದಿರೋ ಹೋರಾಟಕ್ಕೆ ಇದೀಗ ಸ್ಪಷ್ಟ ಕಲ್ಪನೆ ಸಿಕ್ಕಿದೆ. ಪಕ್ಕದಲ್ಲಿಯೇ ಇದ್ದರೂ ಕನ್ನಡಿಯೊಳಗಿನ ಗಂಟಿನಂತಾಗಿರೋ ಕಾಳಿ ನದಿ ನೀರಿನ ಹೋರಾಟದ ಕಥೆ.

"ಕಾಳಿ"ನದಿ ಎಂಬ ಹೆಸರು ಬಂದಿದ್ದು ಹೀಗೆ..

ಕಾಳಿ ನದಿ, ಕಾಳಿ ಅಂತಾ ಹೆಸರು ಬರಲು ಆರ್ಭಟವಾಗಿ ಹರಿಯೋದು ಒಂದು ಕಾರಣವಾದರೆ, ಕಪ್ಪು ಬಣ್ಣದವಳಾಗಿದ್ದರಿಂದ ಕಾಳಿ ಅಂತಾ ಕರೆದದ್ದು ಮತ್ತೊಂದು ಕಾರಣ. ಉತ್ತರ ಕನ್ನಡ ಜಿಲ್ಲೆಯ ದಿಗ್ಗಿ ಅನ್ನೋ ಪ್ರದೇಶದಲ್ಲಿ ಹುಟ್ಟೋ ಕಾಳೆ ನದಿ 184 ಕಿ.ಮೀ. ವೇಗವಾಗಿ ಹರಿದು ಅರಬ್ಬಿ ಸಮುದ್ರ ಸೇರುತ್ತದೆ.

ಈ ಮಧ್ಯೆ ನೂರಾರು ಗ್ರಾಮಗಳಿಗೆ ಕುಡಿಯೋ ನೀಡು ನೀಡೋ ಮೂಲಕ ಸಾವಿರಾರು ಎಕರೆ ಪ್ರದೇಶದ ಹೊಲ-ಗದ್ದೆಗಳಿಗೆ ನೀರಾವರಿ ಕಲ್ಪಿಸಿದೆ. ಆದರೆ ಈ ನದಿಯ ಹೆಚ್ಚು ನೀರು ಬಳಕೆಯಾಗದೇ ಅರಬ್ಬಿ ಸಮುದ್ರ ಸೇರುತ್ತಿದೆ. ಹೀಗಾಗಿ ಈ ನೀರಿನ ಬಳಕೆಗೆ ಪಕ್ಕದ ಜಿಲ್ಲೆ ಧಾರವಾಡದಲ್ಲಿ ಅನೇಕ ವರ್ಷಗಳಿಂದ ಹೋರಾಟ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಮಹಾದಾಯಿ ಹೋರಾಟ ನಡೆದು, ಅದು ಸಾಕಷ್ಟು ಸುದ್ದಿಯನ್ನೂ ಮಾಡಿದೆ.

ಮಹಾದಾಯಿ ಅಂತರ್ ರಾಜ್ಯ ನದಿಯಾಗಿರೋದ್ರಿಂದ ಸಧ್ಯಕ್ಕೆ ನ್ಯಾಯಾಧಿಕರಣದಲ್ಲಿ ವಿಚಾರಣೆ ನಡೆದಿದೆ. ಆದರೆ ಈ ಕಾಳಿ ನದಿ ರಾಜ್ಯದಲ್ಲಿಯೇ ಹುಟ್ಟಿ, ರಾಜ್ಯದಲ್ಲಿಯೇ ಹರಿದು, ಕೊನೆಗೆ ಸಮುದ್ರವನ್ನು ಸೇರೋದ್ರಿಂದ ಈ ನದಿಯ ನೀರನ್ನು ಉಳಿದ ಜಿಲ್ಲೆಗಳಿಗೆ ಬಳಸಿಕೊಂಡರೆ ಲಕ್ಷಾಂತರ ಎಕರೆ ಪ್ರದೇಶದಲ್ಲಿ ನೀರಾವರಿ ಮಾಡಬಹುದು ಅನ್ನೋದೇ ಹೋರಾಟದ ಹಿಂದಿರೋ ಯೋಚನೆ.

134 ಟಿಎಂಸಿ ಕಾಳಿ ನದಿ ನೀರು ಸಮುದ್ರ ಸೇರುತ್ತಿದೆ

ಪ್ರತಿವರ್ಷ ಕಾಳಿ ನದಿಯಲ್ಲಿ ಸುಮಾರು 164 ಟಿಎಂಸಿ ನೀರು ಹರಿಯುತ್ತೆ. ಅದರಲ್ಲಿ ಕೃಷಿ ಹಾಗೂ ಕುಡಿಯೋ ನೀರಿಗೆ ಬಳಕೆಯಾಗೋದು 30 ಟಿಎಂಸಿ ನೀರು. ಉಳಿದ ಸುಮಾರು 134 ಟಿಎಂಸಿ ನೀರು ಅರಬ್ಬಿ ಸಮುದ್ರಕ್ಕೆ ಸೇರುತ್ತದೆ. ಹೀಗೆ ಪೋಲಾಗೋ ನೀರನ್ನ ರೈತರ ಜಮೀನಿಗೆ ಒದಗಿಸಬೇಕೆಂಬ ಕೂಗು ಕೇಳಿ ಬಂದು ಹಲವಾರು ದಶಕಗಳೇ ಕಳೆದಿವೆ. ಆದರೆ ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆಯಿಂದಾಗಿ ಈ ಕೂಗಿಗೆ ಯಾವುದೇ ಮಹತ್ವ ಬಂದಿಲ್ಲ.

ಈಗಾಗಲೇ ಈ ನೀರನ್ನು ಏತ ನೀರಾವರಿ ಯೋಜನೆ ಮೂಲಕ ಹಳಿಯಾಳ ತಾಲೂಕಿಗೆ ಹರಿಸಲು ಯೋಜನೆ ರೂಪಿಸಲಾಗಿದೆ. ಅಲ್ಲಿಂದ ಕೆಲವೇ ಕಿ.ಮೀ. ದೂರದಲ್ಲಿ ಧಾರವಾಡ ಜಿಲ್ಲೆಯ ಆರಂಭಗೊಳ್ಳುತ್ತೆ. ಧಾರವಾಡ, ನವಲಗುಂದ ಹಾಗೂ ಕಲಘಟಗಿ ತಾಲೂಕಿನ ಬಹುತೇಕ ಪ್ರದೇಶದಲ್ಲಿ ಒಣ ಭೂಮಿ ಇದ್ದು, ಇಲ್ಲಿ ನೀರಿನ ಮೂಲಗಳಿಲ್ಲ. ಹೀಗಾಗಿ ನೀರನ್ನು ಈ ತಾಲೂಕುಗಳಿಗೆ ಬಳಸಿಕೊಳ್ಳೋ ಮೂಲಕ ರೈತರ ಬದುಕಿಗೆ ಆಸರೆವೊದಗಿಸಬಹುದು. ಅಲ್ಲದೇ ನೀರು ಈ ತಾಲೂಕುಗಳಿಗೆ ಹರಿಯಲು ಏತ ನೀರಾವರಿಯ ಅವಶ್ಯಕತೆಯೂ ಇಲ್ಲ. ಕಾಲುವೆಗಳ ಮೂಲಕವೂ ನೀರು ಬರುತ್ತೆ. ಹೀಗೆ ಮಾಡಿದಲ್ಲಿ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ.

ಧಾರವಾಡ ಜಿಲ್ಲೆಯನ್ನು ಅರೆ ಮಲೆನಾಡು ಜಿಲ್ಲೆ ಅಂತಾ ಕರೆಯಲಾಗುತ್ತೆ. ಆದರೆ ಇತ್ತೀಚಿಗೆ ನಾಶವಾಗುತ್ತಿರೋ ಕಾಡಿನ ಪ್ರಮಾಣ ಹೆಚ್ಚಾಗಿರೋದ್ರಿಂದ ಮಳೆಯೂ ಕಡಿಮೆಯಾಗುತ್ತಿದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಈ ಪ್ರದೇಶವೂ ಬಯಲು ಸೀಮೆಯಂತೆಯೇ ನೀರಿಗಾಗಿ ಹಪಹಪಿಸುತ್ತಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಪೋಲಾಗಿ ಸಮುದ್ರಕ್ಕೆ ಸೇರುತ್ತಿರೋ ನೀರು ರೈತರ ಭೂಮಿಗೆ ಸಿಗಲಿ ಅನ್ನೋದೇ ಈ ಹೋರಾಟದ ಹಿಂದಿನ ಉದ್ದೇಶ.

ವರದಿ :-ದುರ್ಗೇಶ ನಾಯಿಕ, TV5 ಧಾರವಾಡ

Next Story

RELATED STORIES