Top

ರೈತರ ಸಾಲಮನ್ನಾ: ಕುಮಾರಸ್ವಾಮಿ ಗೊಂದಲದ ಹೇಳಿಕೆ

ರೈತರ ಸಾಲಮನ್ನಾ: ಕುಮಾರಸ್ವಾಮಿ ಗೊಂದಲದ ಹೇಳಿಕೆ
X

ಧರ್ಮಸ್ಥಳ: ನಾಳೆ ಪ್ರಮಾಣವಚನ ಸ್ವೀಕರಿಸಲಿರುವ ಹೆಚ್.ಡಿ.ಕುಮಾರಸ್ವಾಮಿ ರೈತರ ಸಂಪೂರ್ಣ ಸಾಲ ಮನ್ನ ಕುರಿತು ಗೊಂದಲದ ಹೇಳಿಕೆ ನೀಡಿದ್ದಾರೆ. ಈ ಮೂಲಕ ರೈತರ ಸಾಲಮನ್ನ ಅಧಿಕಾರ ಸ್ವೀಕರಿಸಿದ 24 ಗಂಟೆಯೊಳಗೆ ಮನ್ನ ಮಾಡುವುದು ಅನುಮಾನವಾಗಿದೆ.

ಮಂಗಳವಾರ ಧರ್ಮಸ್ಥಳಕ್ಕೆ ಭೇಟಿ ನೀಡಿದ ನಂತರ ರೈತರ ಸಾಲಮನ್ನ ಖಚಿತ ಎಂದು ಹೇಳಿದ್ದ ಕುಮಾರಸ್ವಾಮಿ, ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಸಾಲಮನ್ನ ಬಗ್ಗೆ ಕೂಡಲೇ ನಿರ್ಧಾರ ಕೈಗೊಳ್ಳುವುದು ಕಷ್ಟ ಎಂದಿದ್ದಾರೆ.

ಜೆಡಿಎಸ್​ಗೆ ಸಂಪೂರ್ಣ ಬೆಂಬಲ ಸಿಕ್ಕಿದ್ದರೆ ನುಡಿದಂತೆ 24 ಗಂಟೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತಿದ್ದೆ. ಈಗ ಕಾಂಗ್ರೆಸ್ ಜೊತೆಗಿದ್ದೇವೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಅಭಿಪ್ರಾಯ ಪಡೆದು ಅವರ ಸಹಮತ ಪಡೆದು ಸಾಲಮನ್ನಾ ಮಾಡಬೇಕಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಹಿನ್ನೆಲೆಯಲ್ಲಿ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ದೇವರ ದರ್ಶನ ಪಡೆಯುವಲ್ಲಿ ಬ್ಯೂಸಿಯಾಗಿದ್ದಾರೆ. ನಿನ್ನೆ ತಮ್ಮ ಹುಟ್ಟೂರಾದ ಹೊಳೆನರಸಿಪುರಕ್ಕೆ ಭೇಟಿ ನೀಡಿದ್ದ ಹೆಚ್ಡಿಕೆ ಅಲ್ಲಿಯೂ ಕೂಡ ದೇಗುಲಗಳಿಗೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದಿದ್ದಾರೆ. ಇಂದು ಕೂಡ ಹೆಚ್ಡಿಕೆ ಪತ್ನಿ ಅನಿತಾಕುಮಾರಸ್ವಾಮಿಯೊಂದಿಗೆ ಧರ್ಮಸ್ಥಳಕ್ಕೆ ಭೇಟಿ ನೀಡಿ, ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ದೇವಸ್ಥಾನದ ಅಂಗಳದಲ್ಲಿ ಕುಮಾರಸ್ವಾಮಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು.ಪೂಜೆ ಮುಗಿಸಿದ ಹೆಚ್ಡಿಕೆ ದಂಪತಿ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಹೂಹಾರ ಹಾಕಿ ಫಲಪುಷ್ಪ ನೀಡಿ ಸನ್ಮಾನ ಮಾಡಿದರು.

ಮಂಗಳೂರಿನಲ್ಲಿ ನಡೆಯುವ ಕೋಮುಗಲಭೆಯ ಬಗ್ಗೆ ಮಾತನಾಡಿದ ಹೆಚ್ಡಿಕೆ, ಕರಾವಳಿ ಜನರು ಸಹೋದರ ಮನೋಭಾವದಲ್ಲಿ ಬದುಕಬೇಕು. ಯಾವುದೇ ದ್ವೇಷದ ರಾಜಕಾರಣಕ್ಕೆ ಆಸ್ಪದ ಕೊಡಬೇಡಿ. ಕಾನೂನು ಭಂಗಕ್ಕೆ ಅವಕಾಶ ಕೊಡಬೇಡಿ. ಯಾವುದೇ ಸಮಸ್ಯೆ ಇದ್ರೆ ನನ್ನನ್ನು ಸಂಪರ್ಕಿಸಿ, ಶಾಂತಿ ಕದಡೋ ಜನರ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಹೇಳಿದರು.

ಧರ್ಮಸ್ಥಳದಿಂದ ಪ್ರವಾಸ ಮುಂದುವರೆಸಿದ ಹೆಚ್.ಡಿ.ಕುಮಾರಸ್ವಾಮಿ, ಶೃಂಗೇರಿ ಶಾರದಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

Next Story

RELATED STORIES