Top

ಜ್ವಲಂತ ಸಮಸ್ಯೆಗಳಿಗೆ ಪರಿಹಾರಕ್ಕೆ, ಡಿಸಿಎಂ ಪಟ್ಟ ಉತ್ತರ ಕರ್ನಾಟಕಕ್ಕೆ ದೊರಕೀತೆ.?

ಜ್ವಲಂತ ಸಮಸ್ಯೆಗಳಿಗೆ ಪರಿಹಾರಕ್ಕೆ, ಡಿಸಿಎಂ ಪಟ್ಟ ಉತ್ತರ ಕರ್ನಾಟಕಕ್ಕೆ ದೊರಕೀತೆ.?
X

ಹುಬ್ಬಳ್ಳಿ : ಮುಖ್ಯಮತ್ರಿ, ಉಪ ಮುಖ್ಯಮಂತ್ರಿ ಮತ್ತು ಕ್ಯಾಬಿನಟ್ ಸ್ಥಾನಮಾನದ ಸ್ಥಾನಮಾನಗಳು ಕೇವಲ ಹೇಳೆ ಮೈಸೂರು ಹಾಗೂ ಮಧ್ಯ ಕರ್ನಾಟಕ ಭಾಗದ ಶಾಸಕರಿಗೆ ನೀಡಲಾಗುತ್ತಿದೆ ಎಂಬ ಅಸಮದಾನದ ಮಾತುಗಳು ಕೇಳಿಬರುತ್ತಿವೆ.

ಈ ಹಿಂದೆ ಸಹ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಆಡಳಿತಾವಧಿಯಲ್ಲಿ ಸಹ ಸಿಗಬೇಕಾಗಿದ್ದ ಮಟ್ಟಿಗೆ ಸ್ಥಾನಮಾನ ಸಿಗಲಿಲ್ಲ. ಉತ್ತರ ಕರ್ನಾಟಕ ಭಾಗದಿಂದ ಎಸ್.ಆರ್.ಬೊಮ್ಮಾಯಿ ಹಾಗೂ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದರು. ಆದ್ರೆ ವಿಚಿತ್ರ ಎಂದ್ರೆ ಉತ್ತರ ಕರ್ನಾಟಕ ಭಾಗದಿಂದ ಎಂ.ಪಿ.ಪ್ರಕಾಶ ಅವರನ್ನು ಬಿಟ್ಟರೆ ಯಾರು ಉಪ ಮುಖ್ಯಮಂತ್ರಿಯಾಗಲಿಲ್ಲ. ಹೀಗಾಗಿ ಬಹುದಿನಗಳ ನಂತರ ಉತ್ತರ ಕರ್ನಾಟಕದ ಸಮಗ್ರ ಅಭವೃದ್ಧಿ ದೃಷ್ಠಿಯಿಂದ ಅರ್ಹ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಕೂಗು ಬಲವಾಗಿದೆ.

ಈ ಭಾಗದಿಂದ ಎಂಟು ಸಲ ಶಾಸಕರಾಗಿ ಆಯ್ಕೆಯಾಗಿರುವ ಆರ್.ವಿ.ದೇಶಪಾಂಡೆ, ಶಿಕ್ಷಕರ ಕ್ಷೇತ್ರದಿಂದ 7 ಸಲ ವಿಧಾನ ಪರಿಷತ್‍ಗೆ ಪ್ರವೇಶ ಮಾಡಿರುವ ಬಸವರಾಜ ಹೊರಟ್ಟಿ, ಗದಗ ಜಿಲ್ಲೆಯ ಎಚ್.ಕೆ.ಪಾಟೀಲ್, ಲಿಂಗಾಯತ್ ಧರ್ಮದ ಹೋರಾಟದ ಮುಂಚೂಣಿಯ ನಾಯಕ ಎಂ.ಬಿ.ಪಾಟೀಲರಂತಹ ಹಿರಿಯ ಮತ್ತು ಅರ್ಹ ನಾಯಕರಿದ್ದಾರೆ.

ಉತ್ತರ ಕರ್ನಾಟಕದ ಬಗ್ಗೆ ವಿಶೇಷ ಕಾಳಜಿ ಮತ್ತು ಈ ಭಾಗದ ಬಗ್ಗೆ ಹೆಚ್ಚು ತಿಳಿದುಕೊಂಡವರಲ್ಲಿ ಅದು ಹಳೇ ಮೈಸೂರು ಭಾಗದ ಮುಖಂಡರಲ್ಲಿ ಹೆಚ್ಚು ಕಾಳಜಿವುಳ್ಳವರು ಎಚ್.ಡಿ.ಕುಮಾರಸ್ವಾಮಿ. ಇವರು ಮೇಲಿಂದ ಮೇಲೆ ಉತ್ತರ ಕರ್ನಾಟಕ ಭಾಗಕ್ಕೆ ಬಂದಾಗ ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಿ ನಾನು ಮುಖ್ಯಮಂತ್ರಿಯಾದರೆ ಖಂಡಿತಾ ಬಗೆ ಹರಿಸುತ್ತೇನೆ ಎಂದು ಭರವಸೆ ನೀಡುತ್ತಿದ್ದರು. ಆದ್ದರಿಂದ ಈಗ ಎಚ್.ಡಿ.ಕುಮಾರಸ್ವಾಮಿ ನೇತೃತವದಲ್ಲಿಯೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಾದರೂ ನಮ್ಮ ಸಮಸ್ಯೆಗಳಿಗೆ ಕೊನೆ ಹಾಡುತ್ತಾ ಎಂಬ ಆಶಾಭಾವನೆ ಹೊಂದಿದ್ದಾರೆ.

ರಾಜ್ಯದಲ್ಲಿ ಯಾವುದೇ ಸರ್ಕಾರದ ರಚನೆಯಾಗಬೇಕಾದರೆ ಉತ್ತರ ಕರ್ನಾಟಕ ಭಾಗದ ನಾಯಕರ ಪಾತ್ರ ಮಹತ್ವದ ಪಾತ್ರವಹಿಸುತ್ತದೆ. ಆದರೆ ದುರಂತವೆಂದರೆ ರಾಜಕೀಯ ಕ್ಷೇತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಈ ಭಾಗದ ಜನತೆ ಮತ್ತು ಮುಖಂಡರು ತೀವ್ರ ಹಿನ್ನಡೆ ಅನುಭವಿಸುತ್ತಿದ್ದಾರೆ. ಒಂದು ಅಂತೂ ಸತ್ಯ. ಇದಕ್ಕೆ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದ್ದು ಇವರ ಒಡಕಿನ ಲಾಭ ಹಳೆ ಮೈಸೂರು ಮತ್ತು ಮಧ್ಯ ಕರ್ನಾಟಕದ ಭಾಗದ ನಾಯಕರು ಪಡೆಯುತ್ತಿದ್ದಾರೆ.

ಹಳೆ ಮೈಸೂರು ಮತ್ತು ಮಧ್ಯ ಕರ್ನಾಟದಕ ಭಾಗದ ನಾಯಕರು ಮುಖ್ಯಮಂತ್ರಿಯಾಗಲು ಉತ್ತರ ಕರ್ನಾಟದಕ ನಾಯಕರು ಸದಾ ಬೆಂಬಲಿಸುತ್ತಾ ಬಂದಿದ್ದಾರೆ. ಈಗಾಗಲೇ ಮಧ್ಯ ಕರ್ನಾಟಕ ಹಳೇ ಮೈಸೂರು ಭಾಗದಿಂದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ, ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ, ಸದಾನಂದಗೌಡ ಅವರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಾಗಿದ್ದಾರೆ. ಉತ್ತರ ಕರ್ನಾಟಕದ ಭಾಗದ ಎಷ್ಟೋ ನಾಯಕರು ಅರ್ಹರಿದ್ದರೂ ಅವರಿಗೆ ಸಿಎಂ ಹಾಗೂ ಡೆಪ್ಯೂಟೊ ಸಿಎಂ ಸ್ಥಾನ ಮಾನ ಸಿಕ್ಕಲ್ಲ.

ಈಗಲೂ ಸಹ ಹಳೇ ಮೈಸೂರು ಭಾಗದ ಮತ್ತು ಮಧ್ಯ ಕರ್ನಾಟಕ ಭಾಗದ ನಾಯಕರದ ಜಿ.ಪರಮೇಶ್ವರ್, ಶಾಮನೂರು ಶಿವಶಂಕರಪ್ಪ, ಡಿ.ಕೆ.ಶಿವಕುಮಾರ್ ಡಿಸಿಎಂ ಪಟ್ಟಕ್ಕೆ ತೀವ್ರ ಪೈಪೋಟಿ ನಡೆಸಿದ್ದಾರೆ. ಆದ್ದರಿಂದ ಉತ್ತರ ಕರ್ನಾಟಕದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಡಿಸಿಎಂ ಹುದ್ದೆ ನೀಡುತ್ತಾರೆಯೇ ಎಂಬ ಚರ್ಚೆ ಬಲಗೊಳ್ಳುತ್ತಿದೆ.

ಉತ್ತರ ಕರ್ನಾಟಕ ಭಾಗದ ಜನತೆ ಅಭಿವೃದ್ಧಿ ವಿಷಯಗಳಲ್ಲಿ ಪ್ರತಿಯೊಂದನ್ನು ಪಡೆಯಬೇಕಾದರೆ ಹೋರಾಟ ಮಾಡಿಯೇ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.‌ ಈಗಾಗಲೇ ಹೈಕೋರ್ಟ್ ಪೀಠ ಇರಬಹುದು. ನೈರುತ್ಯ ರೇಲ್ವೆ ಯೋಜನೆ, ಐಐಟಿ, ಸ್ಮಾರ್ಟ್ ಸಿಟಿ ಗಳಂಹ ಪ್ರಮುಖ ಯೋಜನೆಗಳು ಇಲ್ಲಿಗೆ ಬರಬೇಕಾದರೆ ಹೋರಾಟವೇ ಕಾರಣ.

ಇನ್ನು ಸಹ ಈಗಾಗಲೇ ನಾಲ್ಕು ದಶಕಗಳ ಕಾಲ ನೆನೆಗುದಿಗೆ ಬಿದ್ದಿರುವ ಕಳಸಾ ಬಂಡೂರಿ ಮಹದಾಯಿ ಯೋಜನೆ, ಮಲ್ಲಪ್ರಭಾ ಜಲಾಶಯ ಹೂಳು ಎತ್ತುವುದು, ಕೆಎಟಿ ಸ್ಥಾಪನೆ, ಅಧಿಕಾರಿ ವಿಕೇಂದ್ರೀಕರಣ ನೀತಿಯಂತೆ ಪ್ರಮುಖ ಸರ್ಕಾರಿ ಕಚೇರಿಯಗಳನ್ನು ಹುಬ್ಬಳ್ಳಿ ಧಾರವಾಡಕ್ಕೆ ಸ್ಥಳಾಂತರವಾಗಿವೆ. ಸ್ಮಾರ್ಟ್ ಸಿಟಿ ಮತ್ತು ಬಿ.ಆರ್ ಟಿಸಿ ಯೋಜನೆ ತ್ವರಿತಗತಿಯಲ್ಲಿ ಆರಂಭ, ಕೃಷಿ ಉತ್ಪನ್ನ ಮಾರುಕಟ್ಟೆ ಮೇಲ್ದರ್ಜೆಗೆ, ಕಿಮ್ಸ್ ಆಸ್ಪತ್ರೆಗೆ ಕಾಯಕಲ್ಪ, ಟ್ರಕ್‌ಟ್ರಮಿನಲ್, ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆ , ರಿಂಗ್ ರಸ್ತೆ ನಿರ್ಮಾಣ, ಹಿರೋ ಮೋಟಾರ್ ಕಾರ್ಖಾನೆ, ಟೈಕ್ಸಟೈಲ್, ಟಾಟಾ ಮಾರ್ಕೋಪಾಲೋಕ್ಕೆ ಉತ್ತೇಜನಕ್ಕೆ, ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕ ಆದ್ಯತೆ, ಕೈಗಾರಿಕಾ ಸ್ಥಾಪನೆಗೆ ಭೂಮಿ ಖರೀದಿಯಲ್ಲಿ ರಿಯಾಯಿತಿ ನೀಡಬೇಕು. ಈ ಎಲ್ಲ ಉತ್ತರ ಕರ್ನಾಟಕ ಭಾಗದ ಪ್ರಮುಖ ಯೋಜನೆಗಳು ಸಮರ್ಕವಾಗಿ ಜಾರಿಗೆ ಬಂದಾಗ ಮಾತ್ರ ಉತ್ತರ ಕರ್ನಾಟಕದ ಅಭಿವೃದ್ಧಿ ಸಾಧ್ಯ.

ಉತ್ತರ ಕರ್ನಾಟಕವನ್ನು ಪ್ರತಿಯೊಂದು ಕ್ಷೇತ್ರದಲ್ಲಿ ನಿರ್ಲಕ್ಷ್ಯ ಮಾಡಲಾಗಿದೆ. ಮೈಸೂರು, ಬೆಂಗಳೂರು ಹಾಗೂ ಮಂಗಳೂರು ಮಾದರಿಯಂತೆ ಕೈಗಾರಿಕೆಗಳಿಗೆ ಮೊದಲು ಸರ್ಕಾರ ಉತ್ತೇಜನ ನೀಡಬೇಕಾಗಿದೆ. ಸಣ್ಣ ಕೈಗಾರಿಗಳಿಗೆ ಕಡಿಮೆ ದರದಲ್ಲಿ ಭೂಮಿ ನೀಡಿದರೆ ಸಣ್ಣ ಕೈಗಾರಿಕೆಗಳು ಇನ್ನಷ್ಟು ಅಭಿವೃದ್ಧಿ ಪಡಿಸಬಹುದು. ಕೇವಲ ಕಚ್ಚಾಟದಲ್ಲಿಯೇ ಕಾಲಹರಣ ಹಾಕಿದರೆ ಉತ್ತರ ಕರ್ನಾಟಕ ಮತ್ತಷ್ಟು ಹಿಂದುಳಿಯಲಿದೆ. ಈ ನಿಟ್ಟಿನಲ್ಲಿ ಹೊಸ ಸರ್ಕಾರ ಹೆಜ್ಜೆ ಇಡಬೇಕು ಎಂಬುದು ಇಲ್ಲಿನ ಸಾರ್ವಜನಿಕರ ಒಕ್ಕೊರಲಿನ ನುಡಿಯಾಗಿದೆ.

ವರದಿ - ಯಲ್ಲಪ್ಪ‌ ಸೋಲಾರಗೊಪ್ಪ TV5 ಹುಬ್ಬಳ್ಳಿ

Next Story

RELATED STORIES