Top

ಜೆಡಿಎಸ್ ಶಾಸಕರಿಗೆ 100 ಕೋಟಿ ಆಮೀಷ: ಕುಮಾರಸ್ವಾಮಿ

ಜೆಡಿಎಸ್ ಶಾಸಕರಿಗೆ 100 ಕೋಟಿ ಆಮೀಷ: ಕುಮಾರಸ್ವಾಮಿ
X

ಕೇಂದ್ರದಲ್ಲಿರುವ ಬಿಜೆಪಿ ಸರಕಾರ ರಾಜಭವನ ದುರ್ಬಳಕೆ ಮಾಡಿಕೊಂಡು ಸರಕಾರ ರಚನೆಗೆ ಮುಂದಾಗಿದೆ. ಜೆಡಿಎಸ್ ಶಾಸಕರಿಗೆ 100 ಕೋಟಿ ರೂ. ಆಮೀಷ ಒಡ್ಡಲಾಗಿದೆ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮುಖಂಡರು ನಮ್ಮ ಜೆಡಿಎಸ್ ಶಾಸಕರಿಗೆ ತಲಾ 100 ಕೋಟಿ ರೂ. ಹಾಗೂ ಸಚಿವ ಖಾತೆ ನೀಡುವ ಭರವಸೆ ನೀಡಿ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದರು.

ಬಹುಮತ ಇಲ್ಲದೇ ಇದ್ದರೂ ಬಿಜೆಪಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ. ಸರಕಾರ ರಚನೆಗೆ ಅಗತ್ಯವಾದ ಸಂಖ್ಯಾಬಲ ನಮ್ಮ ಬಳಿ ಇದೆ. ನಮ್ಮ ಬಳಿ 116 ಶಾಸಕರು ಇದ್ದಾರೆ. ಆದರೂ ಸಂಖ್ಯಾಬಲ ಇಲ್ಲದ ಬಿಜೆಪಿಯನ್ನು ಆಹ್ವಾನಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಗೋವಾ, ಹರಿಯಾಣ ಮತ್ತು ಮಣಿಪುರದಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಅಲ್ಲಿನ ರಾಜ್ಯಪಾಲರು ಸಣ್ಣ ಪುಟ್ಟ ಪಕ್ಷಗಳ ಮೈತ್ರಿ ಪಕ್ಷಗಳನ್ನು ಆಹ್ವಾನಿಸಿತ್ತು. ಇದೇ ರೀತಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಮುಳುಗಿಸಲು ಬಿಜೆಪಿ ಪ್ಲಾನ್ ಮಾಡಿದೆ ಎಂದು ಆರೋಪಿಸಿದರು.

2008ರಲ್ಲಿ ಆಪರೇಷನ್ ಕಮಲ ಮಾಡಿದ್ದು ನನಗೆ ನೆನಪಿದೆ. ಅಷ್ಟು ದೊಡ್ಡ ಮೊತ್ತ ಕೊಟ್ಟು ಶಾಸಕರನ್ನು ಖರೀದಿಸುತ್ತಾರೆ ಅಂದರೆ ಅದು ಬ್ಲಾಕೋ, ವೈಟೋ ಎಂದು ಬಿಜೆಪಿ ಹೇಳಬೇಕು. ಈ ರೀತಿ ಅಡ್ಡದಾರಿ ಹೆಚ್ಚು ದಿನ ಇರುವುದಿಲ್ಲ. ಬಿಜೆಪಿಯವರು ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಯೋಚಿಸುತ್ತಿದೆ ಎಂದರು.

ನನಗೆ ಎರಡೂ ಕಡೆ ಆಹ್ವಾನವಿತ್ತು. ನನ್ನ ತಂದೆಯವರಿಗೆ ಇದ್ದ ಕಪ್ಪು ಚುಕ್ಕೆ ತೊಡೆದು ಹಾಕಲು ಕಾಂಗ್ರೆಸ್ ಆಹ್ವಾನ ಸ್ವೀಕರಿಸಿದ್ದೇವೆ. ಅಧಿಕಾರ ಹಿಡಿಯುವ ಆಸೆಯಿಂದಲೂ ಈ ನಿರ್ಧಾರ ಕೈಗೊಂಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

Next Story

RELATED STORIES