Top

ಈ ಬಾರಿ ನಾವೇ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ ಎಲ್ಲ ನಾಯಕರು

ಈ ಬಾರಿ ನಾವೇ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ ಎಲ್ಲ ನಾಯಕರು
X

ಈ ಸಲ ಬಿಜೆಪಿ ಗೆಲ್ಲೋದು 100% ನಿಜ. ಈ ಸಲ ನಾನೇ ಪ್ರಮಾಣವಚನ ಸ್ವೀಕಾರ ಮಾಡೋದು, ಅತ್ಯಂತ ಉತ್ಸಾಹದಿಂದ ಜನ ಪ್ರಜಾತಂತ್ರದ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಬಂದೇ ಬರುತ್ತೆ. ಹೀಗೆ ಅತಿಯಾದ ಆತ್ಮವಿಶ್ವಾಸ ವ್ಯಕ್ತಪಡಿಸಿದವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ. ಇಂದು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ.ಕಾಂಗ್ರೆಸ್ ವಿರುದ್ದ ಬಲವಾದ ಆಡಳಿತ ವಿರೋಧಿ ಅಲೆ ಇದೆ. ಸಿದ್ದರಾಮಯ್ಯ ಸರ್ಕಾರದ ವೈಫಲ್ಯ ಜನ ಕ್ಷಮಿಸಲ್ಲ. ಸರ್ಕಾರದ ಜನವಿರೋಧಿ ನೀತಿಯನ್ನು ಜನ ಖಂಡಿಸಿದ್ದಾರೆ. ಮತದಾರರು ಕಾಂಗ್ರೆಸ್ ಗೆ ಪೆಟ್ಟು ನೀಡಲಿದ್ದಾರೆ. ಕಾಂಗ್ರೆಸ್ ಕೇವಲ ೭೦, ಜೆಡಿಎಸ್ ೨೨ , ಸೀಟು ಗೆಲ್ಲಲಿದೆ. ಬಿಜೆಪಿ ೧೩೦ ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ನಮಗಾಗಿ ದುಡಿದ ಕಾರ್ಯಕರ್ತರಿಗೆ ಊಟ ಹಾಕಿಸುತ್ತೇನೆ.೧೫ ಕ್ಕೆ ದೆಹಲಿಗೆ ತೆರಳುತ್ತೇನೆ. ಪ್ರಮಾಣ ವಚನ ಸ್ವೀಕಾರ ಕುರಿತು ವರಿಷ್ಟರ ಜೊತೆ ಚರ್ಚೆ ಮಾಡುತ್ತೇನೆ. ೧೭ನೇ ತಾರೀಖು ಶಾಸಕಾಂಗ ಪಕ್ಷದ ಸಭೆ ಕರೆಯುತ್ತೇನೆ. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ 24ಗಂಟೆಯೊಳಗೆ ರೈತರ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದಾರೆ.ಸಿಎಂ ಚಾಮುಂಡೇಶ್ವರಿ, ಬದಾಮಿ ಎರಡೂ ಕ್ಷೇತ್ರದಲ್ಲಿ ಸೋಲುತ್ತಾರೆ.. ಪ್ರಧಾನಿ ಮೋದಿ, ಅಮಿತ್ ಷಾ, ಯು.ಪಿ ಸಿಎಂ ಆದಿತ್ಯನಾಥ ಸೇರಿ ಎಲ್ಲರ ಶ್ರಮದಿಂದಾಗಿ ನಾವು ೧೩೦ ಕ್ಕೂ ಹೆಚ್ಚು ಸ್ಥಾನ ಗೆಲ್ಲೋದು ಖಚಿತ. ನೂರಕ್ಕೆ ನೂರು ಸ್ಪಷ್ಟ ಬಹುಮತದಿಂದ ಸರ್ಕಾರ ರಚಿಸುತ್ತೇವೆ. ಯಾರೊಂದಿಗೂ ಮೈತ್ರಿ ಪ್ರಶ್ನೆಯೇ ಇಲ್ಲ. ನಾನು ಯಾವ ಸಮೀಕ್ಷೆ ಬಗ್ಗೆಯೂ ಮಾತಾಡಲ್ಲ. ನಂದೇ ಲೆಕ್ಕಾಚಾರ.ಇಡೀ ರಾಜ್ಯ ಸುತ್ತಿದ್ದೇನೆ. ನನ್ನ ಲೆಕ್ಕಾಚಾರ ಸುಳ್ಳಾಗಿಲ್ಲ. ಬೇಕಾದರೆ ಎಲ್ಲೆಲ್ಲಿ ಗೆಲ್ತೀವಿ ಅಂತ ಲಿಸ್ಟ್ ಕೊಡಲಾ? ಎಂದು ಪ್ರಶ್ನಿಸಿದ ಬಿಎಸ್ ವೈ, 130ಕ್ಕೂ ಹೆಚ್ಚು ಸೀಟು ಗೆಲ್ತೀವಿ. ದೇವರ ಮುಂದೆ ಇಟ್ಟು ನಿಮಗೆ ಕೊಡ್ತೀನಿ. ಫಲಿತಾಂಶ ಬಂದ ಮೇಲೆ ಲೀಸ್ಟ್ ನೋಡಿಕೊಳ್ಳಿ ಎಂದರು.

ಇನ್ನೊಂದೆಡೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಜಿ.ಪರಮೇಶ್ವರ್, ಸಮ್ಮಿಶ್ರ ಸರ್ಕಾರ ಬರುವುದೇ ಇಲ್ಲ. ಪೂರ್ಣ ಬಹುಮತ ಪಡೆದು ನಾವು ಅಧಿಕಾರಕ್ಕೆ ಬರುತ್ತೇವೆ. ನೀವು ಈಗಲೇ ಬರೆದಿಟ್ಟುಕೊಳ್ಳಿ, ನಮಗೆ ಯಾವುದೇ ಸಂದೇಹವಿಲ್ಲ 100% ವಿಶ್ವಾಸವಿದೆ.99.999 ಕೂಡ ಅಲ್ಲ ನೂರಕ್ಕೆ ನೂರು ನಾವು ಅಧಿಕಾರಕ್ಕೆ ಬರುತ್ತೇವೆ. ಹೀಗಾಗಿ ಮೈತ್ರಿ ವಿಚಾರ ಅಪ್ರಸ್ತುತ ಎಂದಿದ್ದಾರೆ.

ಅಲ್ಲದೇ ನಾವು ದೇವೇಗೌಡ ಅಥವಾ ಕುಾಮರಸ್ವಾಮಿ ಬಗ್ಗೆ ವೈಯಕ್ತಿಕ ವಿಚಾರ ಮಾತನಾಡಿಲ್ಲ. ವಸ್ತು ವಿಚಾರ ಮಾತ್ರ ಟೀಕೆ ಮಾಡಿದ್ದೇವೆ. ಹೀಗಂದ ಮಾತ್ರಕ್ಕೆ ನಾವು ಮೈತ್ರಿಗೆ ಮುಕ್ತವಾಗಿದ್ದೇವೆ ಎಂದಲ್ಲ ಎಂದು ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

Next Story

RELATED STORIES