Top

ಪಂತ್ ಮಿಂಚಿನ ಶತಕಕ್ಕೂ ಬಗ್ಗದ ಹೈದರಾಬಾದ್​ ಪ್ಲೇಆಫ್​ಗೆ ಲಗ್ಗೆ

ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್​ ಸಿಡಿಸಿದ ಮಿಂಚಿನ ಅಜೇಯ ಶತಕದ ಹೊರತಾಗಿಯೂ ಡೆಲ್ಲಿ ಡೇರ್ ಡೆವಿಲ್ಸ್ ಸೋಲುಂಡಿತು. ಶಿಖರ್​ ಧವನ್ ಮತ್ತು ಕೇನ್ ವಿಲಿಯಮ್ಸನ್ ಶತಕ ವಂಚಿತರಾದರೂ ಸನ್​ರೈಸರ್ಸ್ ಹೈದರಾಬಾದ್ ತಂಡ 9 ವಿಕೆಟ್​ಗಳ ಮಹನ್ನೋತ ಜಯದೊಂದಿಗೆ ಪ್ರಸಕ್ತ ಸಾಲಿನ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್​ಗೆ ಮೊದಲ ತಂಡವಾಗಿ ಲಗ್ಗೆ ಹಾಕಿತು.

ಶುಕ್ರವಾರ ತಡರಾತ್ರಿ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್​ಗಳಲ್ಲಿ 5 ವಿಕೆಟ್​ಗೆ 187 ರನ್ ಕಲೆ ಹಾಕಿತು. ಕಠಿಣ ಗುರಿ ಬೆಂಬತ್ತಿದ ಹೈದರಾಬಾದ್ 18.5 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಈ ಗೆಲುವಿನೊಂದಿಗೆ ಹೈದರಾಬಾದ್ 18 ಅಂಕದೊಂದಿಗೆ ಅಗ್ರಸ್ಥಾನಿಯಾಗಿ ಪ್ಲೇಆಫ್​ ಅಧಿಕೃತವಾಗಿ ಪ್ರವೇಶಿಸಿತು.

ಹೈದರಾಬಾದ್ ಪರ ಶಿಖರ್ ಧವನ್ 50 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಸೇರಿದ 92 ರನ್ ಬಾರಿಸಿ ಔಟಾಗದೇ ಉಳಿದರೆ, ಕೇನ್ ವಿಲಿಯಮ್ಸನ್ 53 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ ಅಜೇಯ 83 ರನ್ ಗಳಿಸಿದರು. ಇವರಿಬ್ಬರು ಮುರಿಯದ ಎರಡನೇ ವಿಕೆಟ್​ಗೆ 176 ರನ್ ಜೊತೆಯಾಟ ನಿಭಾಯಿಸಿದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ ಒಂದು ಹಂತದಲ್ಲಿ 43 ರನ್​ಗೆ 3 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. 10 ಓವರ್ ಪೂರ್ಣಗೊಂಡಾಗ 50 ರನ್ ಕೆಲಹಾಕಿತ್ತು. ಆದರೆ ರಿಷಭ್ 63 ಎಸೆತಗಳಲ್ಲಿ 15 ಬೌಂಡರಿ ಹಾಗೂ 7 ಸಿಕ್ಸರ್ ಒಳಗೊಂಡ ಅಜೇಯ 128 ರನ್ ಸಿಡಿಸಿ ತಂಡವನ್ನು ಬೃಹತ್​ ಮೊತ್ತದತ್ತ ತಂದು ನಿಲ್ಲಿಸಿದರು. ರಿಷಭ್​ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, 56 ಎಸೆತಗಳಲ್ಲಿ ಶತಕ ಪೂರೈಸಿದರು.

Next Story

RELATED STORIES