Top

‘ಕಾಲಾ ಕರಿಕಾಲನ್’ ಆಡಿಯೋ ಲಾಂಚ್ನಲ್ಲಿ ತಲೈವಾ ಮನದಾಳದ ಮಾತು

ಫಿಲ್ಮಂ ಬ್ಯೂರೋ : ಸೂಪರ್ ಸ್ಟಾರ್ ರಜಿನಿಕಾಂತ್. ಕೋಟಿ ಕೋಟಿ ಅಭಿಮಾನಿಗಳ ಆರಾಧ್ಯ ದೈವ. ತಮ್ಮ ಐಕಾನಿಕ್ ಸಿನಿಮಾ ರೋಲ್​ಗಳ ಮೂಲಕ, ಸರಳ ಸಜ್ಜನ ವ್ಯಕ್ತಿತ್ವದಿಂದ ತಮಿಳುನಾಡಿನ ಜನತೆಯ ಮನಗೆದ್ದ ನಾಯಕ. 40 ವರ್ಷಗಳಿಂದ ಸೌತ್ ಸಿನಿದುನಿಯಾದಲ್ಲಿ ಸೂಪರ್ ಸ್ಟಾರ್​ ಆಗಿ ಮೆರೆಯುತ್ತಿರೋ ಹೀರೊ. ಸದ್ಯ ರಜಿನಿಕಾಂತ್, ಸ್ವತ: ಪಕ್ಷ ಸ್ಥಾಪಿಸಿ, ರಾಜಕೀಯರಂಗ ಪ್ರವೇಶಕ್ಕೆ ಸಿದ್ಧತೆ ನಡೆಸಿದ್ದಾರೆ.

ತಮ್ಮ ಸಿನಿಮಾಗಳನ್ನೇ ತಲೈವಾ ರಾಜಕೀಯ ರಂಗ ಪ್ರವೇಶಕ್ಕೆ ವೇದಿಕೆ ಮಾಡಿಕೊಳ್ಳೊ ಲೆಕ್ಕಾಚಾರದಲ್ಲಿದ್ದಾರೆ. ಶೀಘ್ರದಲ್ಲೇ ಸೂಪರ್ ಸ್ಟಾರ್ ಕಾಲಾ ಕರಿಕಾಲನ್ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರ್ತಿದ್ದು, ಚೆನ್ನೈನಲ್ಲಿ ಅದ್ದೂರಿಯಾಗಿ ಚಿತ್ರ ಆಡಿಯೋ ಲಾಂಚ್ ಕಾರ್ಯಕ್ರಮ ನೆರವೇರಿದೆ.. ಆಡಿಯೋ ಲಾಂಚ್ ವೇದಿಕೆಯಲ್ಲಿ ರಜಿನಿಕಾಂತ್ ನದಿ ಜೋಡಣೆ ಬಗ್ಗೆ ಮಾತನಾಡಿದ್ದಾರೆ.

ಅದ್ದೂರಿ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಸಿನಿಮಾಗಳ ಕುರಿತು ಮಾತನಾಡುತ್ತಿದ್ದ ರಜಿನಿ ಮಾತು ಏಕಾಏಕಿ ನದಿ ಜೋಡಣೆ ವಿಚಾರದ ಕಡೆ ವಾಲಿತು. ನನ್ನ ಜೀವನದ ಒಂದೇ ಒಂದು ಕನಸು. ದಕ್ಷಿಣ ಭಾರತದ ನದಿಗಳ ಜೋಡಣೆ. ಅದೊಂದು ಆಗಿಬಿಟ್ರೆ ಸಾಕು. ಮರುದಿನವೇ ನಾನು ಕಣ್ಣುಮುಚ್ಚಿದ್ರು ಪರವಾಗಿಲ್ಲ. ಕರ್ತವ್ಯ ಇದೆ, ಸಮಯ ಬರುತ್ತೆ. ನದಿಗಳ ಜೋಡಣೆಯಿಂದ ಜನರ ನೀರಿನ ಸಮಸ್ಯೆ ಬಗೆಹರಿಯುತ್ತೆ ಅನ್ನೋದು ಹಲವರ ಅಭಿಪ್ರಾಯ.. ಸೂಪರ್ ಸ್ಟಾರ್ ರಜಿನಿಕಾಂತ್ ಸಹ ಇಂತಾದೊಂದು ಮಹದಾಸೆಯನ್ನ ವ್ಯಕ್ತಪಡಿಸಿದ್ದಾರೆ.. ಆ ಮೂಲಕ ತಮಿಳುನಾಡಿನ ಜನರ ಮನಗೆಲ್ಲುವ ಪ್ರಯತ್ನ ಮಾಡಿದ್ದಾರೆ.. ಮುಂದಿನ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರೋ ತಲೈವಾ ಈಗಾಗಲೇ ಅದಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದಾರೆ.

2014ರಲ್ಲಿ ರಜಿನಿಕಾಂತ್ ಅಭಿನಯಿಸಿದ ಸಿನಿಮಾ ಲಿಂಗಾ.. ಕನ್ನಡಿಗ ರಾಕ್​ಲೈನ್​​ ವೆಂಕಟೇಶ್ ನಿರ್ಮಾಣದ ಈ ಚಿತ್ರಕ್ಕೆ ಕೆ. ಎಸ್ ರವಿಕುಮಾರ್ ಆಕ್ಷನ್ ಕಟ್ ಹೇಳಿದ್ರು.. ಚಿತ್ರದಲ್ಲಿ ರಜಿನಿಕಾಂತ್ ತಾತ, ಮೊಮ್ಮೊಗನಾಗಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ.. ಅದ್ರಲ್ಲೂ ನೀರಿನ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಅಣೆಕಟ್ಟು ಕಟ್ಟುವ ರಾಜಾ ಲಿಂಗೇಶ್ವರನ್ ಪಾತ್ರ ಎಲ್ಲರ ಮನಗೆದ್ದಿತ್ತು.. ಆ ಪಾತ್ರವನ್ನ ಬಹಳ ಇಷ್ಟಪಟ್ಟು ಅವ್ರು ಮಾಡಿದ್ರಂತೆ.

ಬ್ರಿಟಿಷರ ಕಾಲದಲ್ಲಿ ರಾಜಾ ಲಿಂಗೇಶ್ವರನ್ ತನ್ನ ಜನತೆಯ ನೀರಿನ ಬವಣೆ ನೀಗಿಸಲು, ಅಣೆಕಟ್ಟು ಕಟ್ಟೊ ಮನಸ್ಸು ಮಾಡ್ತಾನೆ..ಅದಕ್ಕಾಗಿ ತನ್ನ ಆಸ್ತಿಪಾಸ್ತಿ ಎಲ್ಲಾ ಕಳೆದುಕೊಂಡು ಬೀದಿಗೆ ಬರ್ತಾನೆ.. ಸದ್ಯ ಭಾರತದಲ್ಲಿ ನೀರಿನ ಸಮಸ್ಯೆ ತಲೆದೋರಿದೆ..ಮುಂದೊಂದು ದಿನ ನೀರಿಗಾಗಿ ರಾಜ್ಯ ರಾಜ್ಯಗಳ ನಡುವೆ ಹೋರಾಟ ನಡೆದ್ರೂ ಅಚ್ಚರಿ ಪಡಬೇಕಿಲ್ಲ..ಇದಕ್ಕೆಲ್ಲಾ ಪರಿಹಾರ ಅಂದ್ರೆ, ದಕ್ಷಿಣ ಭಾರತದ ನದಿಗಳ ಜೋಡಣೆ ಅನ್ನೋದು ರಜಿನಿಕಾಂತ್ ಮಾತು.

ಇನ್ನೂ ತಮ್ಮ ರಾಜಕೀಯ ಪಕ್ಷ ಸ್ಥಾಪನೆಯ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡೋದಾಗಿ ರಜಿನಿಕಾಂತ್ ಹೇಳಿದ್ದಾರೆ.. ಸದ್ಯ ರಜಿನಿಕಾಂತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ..ಕಬಾಲಿ ಖ್ಯಾತಿಯ ಪಾ. ರಂಜಿತ್ ನಿರ್ದೇಶನದ ಕಾಲಾ ಕರಿಕಾಲನ್ ಸಿನಿಮಾ ಮುಂದಿನ ತಿಂಗಳು ತೆರೆಗೆ ಬರ್ತಿದೆ.. ಕಬಾಲಿ ಚಿತ್ರಕ್ಕೆ ಕೆಲಸ ಮಾಡಿದ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡಿದ್ದು, ರಜಿನಿಕಾಂತ್ ಅಳಿಯ ಧನುಷ್, ಬಂಡವಾಳ ಹೂಡಿದ್ದಾರೆ.. ಈಗಾಗಲೇ ಚಿತ್ರದ ಟೀಸರ್ ಮತ್ತು ಸಾಂಗ್ಸ್ ರಿಲೀಸ್ ಆಗಿ ಬೇಜಾನ್ ಸೌಂಡ್ ಮಾಡ್ತಿದೆ.

ಕಾಲಾ ಚಿತ್ರದ ಮೂಲಕ ರಾಜಕೀಯ ಹಿತಾಸಕ್ತಿಗಾಗಿ ಶಾಂತಿಯನ್ನ ಕದಡುವ ಕಾರ್ಯ ನಡೆಯುತ್ತಿದೆ ಅಂತ ತಮಿಳು ನಾಡು ಸರ್ಕಾರದ ಸಚಿವ ಜಯಕುಮಾರ್ ಹೇಳಿದ್ದಾರೆ..ಹಾಡೊಂದರ ಸಾಹಿತ್ಯದಲ್ಲಿ ತಮಿಳುನಾಡು ಸರ್ಕಾರಕ್ಕೆ ಅವಹೇಳನ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.. ಕಾಲ ಟೀಂ ಗಲಭೆ ಸೃಷ್ಟಿಸೋಕೆ ಮುಂದಾಗಿದ್ದು, ಹಾಗಾದಲ್ಲಿ ಕಾನೂನಿನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಅಂತ ಸಚಿವ ಜಯಕುಮಾರ್ ಎಚ್ಚರಿಸಿದ್ದಾರೆ.

ಒಟ್ಟಾರೆ ಸೂಪರ್ ಸ್ಟಾರ್ ರಜಿನಿಕಾಂತ್ ತಮ್ಮ ಸಿನಿಮಾಗಳನ್ನೇ ವೇದಿಕೆ ಮಾಡ್ಕೊಂಡು ರಾಜಕೀಯ ರಂಗ ಪ್ರವೇಶಕ್ಕೆ ಸಿದ್ಧತೆ ನಡೆಸಿದ್ದಾರೆ.. ಸಿನಿಮಾ ಬಗ್ಗೆ ಮಾತನಾಡುತ್ತಾ ರಾಜಕೀಯವಾಗಿಯೂ ಜನರ ಮನಗೆಲ್ಲುವ ಸಾಹಸ ಮಾಡ್ತಿದ್ದಾರೆ.. ಅವ್ರ ಈ ಪ್ರಯತ್ನಕ್ಕೆ ಎಷ್ಟರಮಟ್ಟಿಗೆ ಸಕ್ಸಸ್ ಸಿಗುತ್ತೆ ಅಂತ ಕಾದು ನೋಡ್ಬೇಕು.

Next Story

RELATED STORIES