Top

ಇಂದು ಕನ್ನಡ ಚಿತ್ರರಂಗದ ಖಳನಟ ವಜ್ರಮುನಿ ಜನುಮ ದಿನ

ಇಂದು ಕನ್ನಡ ಚಿತ್ರರಂಗದ ಖಳನಟ ವಜ್ರಮುನಿ ಜನುಮ ದಿನ
X

ಫಿಲ್ಮಂ ಬ್ಯೂರೋ : ಇಂದು ಕನ್ನಡ ಚಿತ್ರರಂಗದ ಖಳನಟರಲ್ಲೇ ವಿಶಿಷ್ಟ ಛಾಪು ಮೂಡಿಸಿದ ನಟ ವಜ್ರಮುನಿ ಹುಟ್ಟ ಹಬ್ಬ. ನಟ ಭೈರವ, ನಟ ಭಯಂಕರ ಅನ್ನೋ ಬಿರುದುಗಳು ಇವ್ರನ್ನ ಬಿಟ್ರೆ ಮತ್ಯಾರಿಗೂ ಒಪ್ಪಲ್ಲ ಅನ್ನಿಸುತ್ತೆ.. ವಜ್ರಮುನಿ, ಖಳನಟರಾಗಿ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದ ಮಹಾನ್ ನಟ..

ಕನ್ನಡ ಚಿತ್ರರಂಗದಲ್ಲಿ ಖಳನಟರಿಗೆ ಸ್ಟಾರ್ ಪಟ್ಟ ತಂದುಕೊಟ್ಟ ನಟರಲ್ಲಿ ಮೊದಲಿಗರು ವಜ್ರಮುನಿ.. ತೆರೆಯ ಮೇಲೆ ಅವರ ಆಕ್ರೋಶ, ತೀಕ್ಷ್ಣ ನೋಟ, ಕಂಚಿನ ಕಂಠ, ಪ್ರಚಂಡ ಅಭಿನಯ, ರಭಸವಾಗಿ ಹೇಳೋ ಸಂಭಾಷಣೆಯನ್ನ ಯಾರು ಮರೆಯಲಿಕ್ಕಿಲ್ಲ. ಅಂದಹಾಗೇ, ವಜ್ರಮುನಿ ಇಂಜಿನಿಯರ್ ಆಗಬೇಕು ಅಂತ ಅವ್ರ ತಂದೆ ಬಯಸಿದ್ದರು.. ಮನೆಯಲ್ಲಿ ತೀವ್ರ ವಿರೋಧದ ನಡುವೆಯು ಹೀರೋ ಆಗಬೇಕು ಅನ್ನೋ ಹಠಕ್ಕೆ ಬಿದ್ದು ವಜ್ರಮುನಿ ಚಿತ್ರರಂಗಕ್ಕೆ ಬಂದ್ರು.

ಪ್ರಚಂಡ ರಾವಣ ನಾಟಕದಲ್ಲಿನ ಅವ್ರ ಅಭಿನಯ ಕಂಡು ಪುಟ್ಟಣ್ಣ ಕಣಗಾಲ್ ಬೆರಗಾಗಿದ್ರು. ಮುಂದೆ ಮಲ್ಲಮ್ಮನ ಪವಾಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ವಜ್ರಮುನಿ ನಟ ಭಯಂಕರ ಅಂತ್ಲೇ ಪ್ರಖ್ಯಾತರಾದ್ರು. ದೊಡ್ಡ ಹೀರೋ ಆಗಬೇಕು ಅಂದುಕೊಂಡು ಚಿತ್ರರಂಗಕ್ಕೆ ಬಂದ ವಜ್ರಮುನಿ ಕನಸು ಈಡೇರಲೇ ಇಲ್ಲ. ನಿಮ್ಮನ್ನು ಖಳನಟನನ್ನಾಗಿ ನೋಡಲು ಪ್ರೇಕ್ಷಕರು ಇಷ್ಟಪಡ್ತಾರೆ. ನಿಮಗೆ ನಾಯಕನ ನಟನ ಪಾತ್ರ ಅಷ್ಟಾಗಿ ಒಪ್ಪಲ್ಲ ಅಂತ ನಿರ್ಮಾಪಕರು, ನಿರ್ದೇಶಕರು ನಿರ್ಧರಿಸಿಬಿಟ್ಟಿದ್ದರು. ವಜ್ರಮುನಿ ಮಾತನ್ನ ಯಾರು ಕೇಳೊ ಗೋಜಿಗೆ ಹೋಗಲಿಲ್ಲ. ಅನಿವಾರ್ಯವಾದ್ರೂ, ಖಳ ನಾಯಕನಾಗಿಯೇ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ್ರು ವಜ್ರಮುನಿ.

ತೆರೆಮೇಲೆ ವಜ್ರಮುನಿ ನಟನಯನನ್ನ ಕಂಡು ಭಯ ಪಟ್ಟವರಿದ್ದಾರೆ..ರೇಪ್ ಸೀನ್​ಗಳಲ್ಲಿ ಅವರ ಅಭಿನಯ ಕಂಡು ಹಿಡಿ ಶಾಪ ಹಾಕಿರೋರು ಇದ್ದಾರೆ..ಆದ್ರೆ ಇಂತಹ ಸನ್ನಿವೇಶಗಳಿಗಾಗಿ ಬಣ್ಣ ಹಚ್ಚುವ ಮುನ್ನ 'ರೇಪ್ ಸೀನ್'ನಲ್ಲಿ ಭಾಗಿಯಾಗುವ ಹೆಣ್ಣು ಮಗಳಿಗೆ ವಜ್ರಮುನಿ ಕ್ಷಮೆ ಕೇಳುತ್ತಿದ್ದರು..ನಿಜ ಜೀವನದಲ್ಲಿ ಅಷ್ಟು ಮೃದು ಸ್ವಭಾವದವರಾಗಿದ್ರು..ಯಾರೊಬ್ಬರಿಗೂ ನೋವಾಗದಂತೆ ನಡೆದುಕೊಳ್ಳುತ್ತಿದ್ದರು ವಜ್ರಮುನಿ..

ಮಯೂರ, ಸಂಪತ್ತಿಗೆ ಸವಾಲ್, ದಾರಿ ತಪ್ಪಿದ ಮಗ, ಪ್ರೇಮದ ಕಾಣಿಕೆ, ಗಿರಿ ಕನ್ಯೆ, ಶಂಕರು ಗುರು, ಆಕಸ್ಮಿಕ ಸೇರಿದಂತೆ ಡಾ. ರಾಜ್​ಕುಮಾರ್ ಜೊತೆ ಹಲವು ಸಿನಿಮಾಗಳಲ್ಲಿ ವಜ್ರಮುನಿ ಅಭಿನಯಿಸಿ ಗೆದ್ದಿದ್ದಾರೆ.. ಇಬ್ಬರು ಪೈಪೋಟಿಗೆ ಬಿದ್ದು ಅಭಿನಯಿಸ್ತಿದ್ದರು.. ಇವರಿಬ್ಬರ ಕಾಂಬಿನೇಷನ್​​ ದೃಶ್ಯಗಳು ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿತ್ತು..

ಸಾಹಸ ಸಿಂಹ ಡಾ. ವಿಷ್ಣುವರ್ಧನ್, ಅಂಬರೀಶ್​​ ಜೊತೆಗೂ ಹಲವು ಸಿನಿಮಾಗಳಲ್ಲಿ ವಜ್ರಮುನಿ ಅಬ್ಬರಿಸಿದ್ದಾರೆ. ಕಲೆಗಾಗಿ ಹಂಬಲಿಸಿ ಜೀವ ಸವೆದ ವಜ್ರಮುನಿ ಸ್ವಂತ ಖುಷಿ, ಆರೋಗ್ಯದ ರಕ್ಷಣೆಯನ್ನ ಸಂಪೂರ್ಣ ಮರೆತಿದ್ದರು. ಖಳನಾಯಕನ ಕಣ್ಣು ರೌದ್ರವಾಗಿ ಕೆಂಪಗೆ ಕಾಣಬೇಕೆಂದು ಸಿಗರೇಟಿನ ಹೊಗೆಯನ್ನು ಕಣ್ಣಿಗೆ ಉಗುಳಿಸಿಕೊಳ್ಳುತ್ತಿದ್ದರು. ಕಣ್ಣು ಮಂಜಾದಾಗಲೇ ಆ ಎಲ್ಲಾ ಪ್ರಯತ್ನಗಳ ದುಷ್ಟರಿಣಾಮ ಅರಿವಿಗೆ ಬಂದಿದ್ದು.

ನಟರಾಗಿ ಮಾತ್ರವಲ್ಲ ನಿರ್ಮಾಪಕರಾಗಿಯೋ ತಾಯಿಗಿಂತ ದೇವರಿಲ್ಲ, ಬ್ರಹ್ಮಾಸ್ತ್ರ, ರಣಭೇರಿ ಹಾಗೂ ಗಂಡಭೇರುಂಡ ಚಿತ್ರಗಳನ್ನ ವಜ್ರಮುನಿ ನಿರ್ಮಿಸಿದ್ರು. ಆದ್ರೆ ಅದ್ಯಾವುದು ಅವ್ರ ಕೈ ಹಿಡೀಲಿಲ್ಲ. ತೊಂಬತ್ತರ ದಶಕದಲ್ಲಿ ರಾಜಕೀಯರಂಗದಲ್ಲೂ ಒಂದು ಕೈ ನೋಡಿದರು ವಜ್ರಮುನಿ. ಆದ್ರೆ ಅವ್ರಿಗೆ ಸಕ್ಸಸ್ ಮಾತ್ರ ಸಿಗಲಿಲ್ಲ.. 2003ರಲ್ಲಿ ಬಂದ ಬಳೆಗಾರ ನಟ ಭಯಂಕರ ವಜ್ರಮುನಿ ಅಭಿನಯದ ಕೊನೆಯ ಚಿತ್ರ.

ಹಲವಾರು ಸಂಘ, ಸಂಸ್ಥೆಗಳು, ಸಹಕಾರಿ ಸಂಘಗಳಲ್ಲಿ ಸಕ್ರಿಯವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದ ವಜ್ರಮುನಿ, ಬೇಡಿ ಬಂದವರಿಗೆ ನೆರವಿನ ಹಸ್ತ ಕೂಡ ಚಾಚಿದ್ದರು.. ಕಿಡ್ನಿ ವೈಫಲ್ಯದಿಂದ 2006 ಜನವರಿ 5ರಂದು ವಜ್ರಮುನಿ ಕೊನೆಯುಸಿರೆಳೆದು, ಇಂದಿಗೆ 14 ವರ್ಷ. ಇಂತಹ ನಟ, ಕನ್ನಡ ಸಿನಿಮಾದ ಖಳನಾಯಕ ಪಾತ್ರದಿಂದ ದೈಹಿಕವಾಗಿ ಅಗಲಿದ್ದರೂ, ಮಾನಸಿಕವಾಗಿ ನಾಯಕನ ಎದಿರು ಎದೆ ನಡುಗುವಂತೆ ಗಹಗಹಿಸಿ ನಗುವ ವಜ್ರಮುನಿ, ಈಗಲೂ ನಮ್ಮ ನೆನಪಿನ ಪರದೆಯ ಮೇಲೆ ಜೀವಂತವಾಗಿದ್ದಾರೆ. ಇಂತಹ ಖಳನಾಯಕ ಕನ್ನಡ ಚಿತ್ರರಂಗಕ್ಕೆ ಮತ್ತೊಮ್ಮ ಹುಟ್ಟಿಬರಲಿ ಎಂದು ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಕೋರಿಕೊಳ್ಳೋಣ..

ನಾಣಿ, ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Next Story

RELATED STORIES