Top

ಸಾರ್ವಜನಿಕರೇ ಎಚ್ಚರ : ಬಿಡಿಎ ಆವರಣದಲ್ಲಿ ಎಲೆ ಎತ್ತಿದೆ ಸೈಟ್ ವಂಚಕರ ಜಾಲ

ಬೆಂಗಳೂರು : ಬಿಡಿಎ ಆವರಣದಲ್ಲಿ ಅಮಾಯಕರನ್ನ ಯಾಮಾರಿಸುವ ವಂಚಕರ ಜಾಲ ತಲೆಎತ್ತಿದೆ. ಜನರನ್ನ ವಂಚಿಸಿ ಸೈಟ್ಗಳನ್ನು ಗುಳುಂ ಮಾಡಲು ಸಿದ್ದವಾಗಿದ್ದಾರೆ. ಈ ಬಗ್ಗೆ ಪ್ರಾಧಿಕಾರದಲ್ಲಿ ನಾಗರೀಕರನ್ನ ವಂಚಿಸುವ ಹಲವು ಪ್ರಕರಣಗಳು ದಾಖಲಾಗಿವೆ. ನಿವೇಶನಗಳನ್ನು ಕಡಿಮೆ ಬೆಲೆಯಲ್ಲಿ ಮಂಜೂರು ಮಾಡಿಸುತ್ತೇವೆ ಎಂದು ಜನರನ್ನು ಯಾಮಾರಿಸುವ ವಂಚಕರು ಬಿಡಿಎ ಅಂಗಳದಲ್ಲೇ ಠಳಾಯಿಸುತ್ತಿದ್ದು, ಅಧಿಕಾರಿಗಳನೇ ಹಾದಿ ತಪ್ಪಿಸುತ್ತಿದ್ದಾರೆ.

ಬಿಡಿಎ ಆವರಣದಲ್ಲಿ ನಾಮ ಹಾಕುವರ ಜಾಲ ತಲೆ ಎತ್ತಿದೆ. ಕೆಂಪೇಗೌಡ ಬಡಾವಣೆಯಲ್ಲಿ ಸೈಟ್ಗಳನ್ನು ಹಂಚಿಕೆ ಕೊಡಿಸ್ತೀವಿ ಅಂತ ಹಣ ತೆಗೆದುಕೊಂಡು ಗುಳಂ ಮಾಡ್ತಿದ್ದಾರೆ. ಕೆಂಪೇಗೌಡ ಲೇಔಟ್ ಹಂಚಿಕೆಗೆ ಪ್ರಾಧಿಕಾರ ಸಿದ್ದತೆ ನಡೆಸಿದ್ದು, ಒಂದೆರಡು ತಿಂಗಳ ನಂತರ ಅಧಿಕೃತವಾಗಿ ಸೈಟ್ ಹಂಚಿಕೆ ಮಾಡುವ ಆಶಯವನ್ನು ಹೊಂದಿದೆ. ಈ ಪ್ರಕ್ರಿಯೆ ಜಾಡು ಹಿಡಿದು ಕೆಲ ವಂಚಕರು ಪ್ರಾಧಿಕಾರದ ಹೆಸರಿನಲ್ಲಿ ಜನರಿಗೆ ವಂಚನೆ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ.

ಹಂಚಿಕೆ ವಿಭಾಗದಲ್ಲಿ ಅರ್ಜಿ ಸಲ್ಲಿಸಿರುವವರ ಹೆಸರುಗಳನ್ನು ಅಕ್ರಮವಾಗಿ ಪಡೆದು, ಅವರ ವಿಳಾಸದಲ್ಲಿ ನಮೂದಾಗಿರುವ ಮೊಬೈಲ್ ಸಂಖ್ಯೆಗೆ ಹುಸಿ ಕರೆಗಳನ್ನು ಮಾಡಲಾಗುತ್ತಿದೆ. ಇವರ ಜತೆ ಪ್ರಾಧಿಕಾರದ ಕೆಲ ಸಿಬ್ಬಂದಿ ಶಾಮೀಲಾಗಿದ್ದು, ಹಣ ಮಾಡುವ ಉದ್ದೇಶದಿಂದ ನಾಗರಿಕರಿಗೆ ಕರೆಗಳನ್ನು ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಇನ್ನೂ ಲೋಕಯುಕ್ತ ದಾಳಿ ನಂತರ ಬಿಡಿಎ ಕಚೇರಿ ಒಳಗೆ ಮಧ್ಯವರ್ತಿಗಳನ್ನ ಬಿಟ್ಟುಕೊಳ್ಳದಂತೆ ಎಚ್ಚರಿಸಲಾಗಿತ್ತು. ಅದೇ. ಈಗ ಪ್ರಾಧಿಕಾರದ ಎಚ್ಚರಿಕೆಯನ್ನು ಧಿಕ್ಕರಿಸಿ ಕೆಲವರು ಬೆಳ್ಳಂಬೆಳಗ್ಗೆಯೇ ಪ್ರಾಧಿಕಾರಕ್ಕೆ ಲಗ್ಗೆ ಇಟ್ಟು ಬಲಿಪಶುಗಳನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಬಿಡಿಎಗೆ ಸಂಬಂಧಿಸಿದ ಭೂಮಿ, ಸೈಟ್ ಹಾಗೂ ನಾಗರಿಕರಿಗೆ ತೊಂದರೆಗೆ ಒಳಗಾದ ಪ್ರಕರಣಗಳನ್ನು ಭೇದಿಸಲು ಪ್ರಾಧಿಕಾರದಲ್ಲೇ ಎಸ್ಪಿ ದರ್ಜೆಯ ಕಾರ್ಯ ಪಡೆ ಕಾರ್ಯ ನಿರ್ವಹಿಸುತ್ತಿದೆ. ಕಾರ್ಯ ಪಡೆಯಲ್ಲಿ 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇದ್ದು, ಕೆಲ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿದೆ. ಆದರೆ, ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿಲ್ಲ.ಇದರಿಂದಾಗಿ ಮಧ್ಯವರ್ತಿಗಳು ರಾಜಾರೋಷವಾಗಿ ವಂಚನೆಯಲ್ಲಿ ಸಕ್ರಿಯರಾಗಿದ್ದಾರೆ.

ಒಟ್ಟಿನಲ್ಲಿ ಸೈಟ್ ವಂಚಕರ ಜಾಲ ಬಿಡಿಎ ನಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ಈ ಬಗ್ಗೆ ಬಿಡಿಎ ಆಯುಕ್ತರು, ಹಾಗೂ ಬಿಡಿಎ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳುವದಕ್ಕೆ ಮುಂದಾಗುತ್ತಿಲ್ಲ. ಬಿಡಿಎ ಒಳಗೆ ಯಾವುದೇ ಮಧ್ಯವರ್ತಿಗಳಿಗೆ ಪ್ರವೇಶ ಇಲ್ಲ. ಆದರೂ ರಾಜಾರೋವಾಗಿ ಪ್ರವೇಶ ಮಾಡುತ್ತಾರೆ. ಬಿಡಿಎ ಆವರಣದ ಹೊರಗೂ ಕರಪತ್ರಗಳನ್ನು ಅಂಟಿಸಿ ಸೈಟ್ಗಳು ಬಿಕರಿಗೆ ಎಂಬ ಬಹಿರಂಗ ಆಹ್ವಾನ ಪ್ರಯತ್ನ ನಡೆಯುತ್ತಿದೆ. ಇದಕ್ಕೇಂದೇ ಪ್ರಾಧಿಕಾರದ ಸನಿಹದಲ್ಲೇ ಗೂಡಂಗಡಿಗಳನ್ನು ಮಾಡಿಕೊಂಡಿದ್ದು, ವಂಚನೆ ರಾಜಾರೋಷವಾಗಿ ನಡೆಯುತ್ತಿದ್ದರೂ ಬಿಡಿಎ ಎಚ್ಚೆತ್ತಿಲ್ಲ. ಈ ಬಗ್ಗೆ ಇನ್ನಾದರೂ ಎಚ್ಚಿತ್ತು, ಕ್ರಮ ಕೈಗೊಳ್ಳಿ ಎಂಬುದು ನೊಂದ ನಾಗರೀಕರ ನುಡಿಯಾಗಿದೆ.

Next Story

RELATED STORIES