ಆಡುವ ಗೊಂಬೆಗೆ ಹಾಡುವ ಗೊಂಬೆಗಳು: ಶಿವಣ್ಣ, ಪುನೀತ್, ರಾಘಣ್ಣ ಗಾಯನ

ಇದೊಂದು ವಿಶಿಷ್ಠ ದಾಖಲೆ. ನಟಸಾರ್ವಭೌಮ ಡಾ. ರಾಜ್ಕುಮಾರ್ರ ಮೂರು ಮಂದಿ ರಾಜರತ್ನರು ಒಂದೇ ಚಿತ್ರದಲ್ಲಿ ಹಾಡಿದ್ದಾರೆ. ಅದೇ ಆಡುವ ಗೊಂಬೆ. ರಿಲೀಸ್ಗೆ ಸಿದ್ದವಾಗಿರೋ ಆಡುವ ಗೊಂಬೆ ಸಿನಿಮಾದ ಆಲ್ಬಮ್ನಲ್ಲಿ ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಮತ್ತು ಶಿವರಾಜ್ಕುಮಾರ್ ಹೀಗೆ ಮೂವರೂ ರಾಜಕುಮಾರರು ಹಾಡಿದ್ದಾರೆ.
ಮೂವರೂ ಮೂರು ಹಾಡುಗಳು ಹಾಡಿರೋದ್ರ ಜೊತೆ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಕೂಡ ಒಂದು ಹಾಡು ಹಾಡಿದ್ದಾರೆ. ಹೀಗೆ ಇಡೀ ಅಣ್ಣಾವ್ರ ಕುಟುಂಬ ಈ ಚಿತ್ರದ ಭಾಗವಾಗಿರೋದಕ್ಕೆ ಕಾರಣ ಅವರು ದೊರೆ-ಭಗವಾನ್ ಮೇಲೆ ಇಟ್ಟಿರೋ ಪ್ರೀತಿ ಮತ್ತು ಗೌರವ.
ಹೌದು, ಆಡುವ ಗೊಂಬೆ ಸಿನಿಮಾಗೆ ದೊರೆ- ಭಗವಾನ್ ಜೋಡಿ ಖ್ಯಾತಿಯ ಹಿರಿಯ ನಿರ್ದೇಶಕ ಭಗವಾನ್ ಅವರು ಌಕ್ಷನ್ ಕಟ್ ಹೇಳಿದ್ದಾರೆ. 70, 80, 90ರ ದಶಕದ ಜನಪ್ರಿಯ ನಾಯಕ-ನಿರ್ದೇಶಕ ಜೋಡಿ ಬರೋಬ್ಬರಿ 30 ವರ್ಷದ ನಂತ್ರ ಒಂದಾಗಿದೆ. ಅದು ಎವರ್ ಗ್ರೀನ್ ಅನಂತನಾಗ್ ಮತ್ತು ಭಗವಾನ್ರ ಪುನರ್ ಸಂಗಮ. ಜೊತೆಗೆ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ಸುಧಾ ಬೆಳವಾಡಿ ಕೂಡ ಆಡುವ ಗೊಂಬೆಯ ಭಾಗವಾಗಿದ್ದಾರೆ.
1996ರ ಬಾಳೊಂದು ಚದುರಂಗ ಚಿತ್ರದ ನಿರ್ದೇಶನದ ನಂತ್ರ ಭಗವಾನ್, 22 ವರ್ಷದ ಗ್ಯಾಪ್ ತೆಗೆದುಕೊಂಡು ಮತ್ತೆ ನಿರ್ದೇಶನಕ್ಕೆ ಹಿಂದಿರುಗಿದ್ದಾರೆ. ಅಂದಹಾಗೆ ಡಾ. ರಾಜ್ಕುಮಾರ್ರ ಅತಿ ಹೆಚ್ಚು ಸಿನಿಮಾಗಳಿಗೆ ಌಕ್ಷನ್ ಕಟ್ ಹೇಳಿದ ಕೀರ್ತಿ ಭಗವಾನ್ರಿಗೆ ಸಲ್ಲುತ್ತದೆ. ಹಾಗಾಗಿ ತಂದೆ ರಾಜ್ ಮತ್ತು ಭಗವಾನ್ರಲ್ಲಿದ್ದ ಬಾಂಧವ್ಯದ ಪ್ರತೀಕವಾಗಿ ಈಗ ದೊಡ್ಮನೆಯ ರಾಜಕುಮಾರರಾದ ಶಿವಣ್ಣ, ರಾಘಣ್ಣ ಮತ್ತು ಪುನೀತ್ ಮೂವರೂ ಆಡುವ ಗೊಂಬೆ ಚಿತ್ರಕ್ಕೆ ಗಾನ ಬಜಾಯಿಸಿದ್ದಾರೆ.
ಭಗವಾನ್ ನಿರ್ದೇಶನದ 50ನೇ ಸಿನಿಮಾ ಇದಾಗಿದ್ದು, 85ನೇ ಇಳಿ ವಯಸ್ಸಲ್ಲೂ ನಿರ್ದೇಶನ ಮಾಡಿದ ಗರಿಮೆ ಇವರಿಗೆ ಸಲ್ಲುತ್ತದೆ. ಸದ್ಯ ಚಿತ್ರೀಕರಣ ಮುಗಿದಿದ್ದು, ಆಡುವ ಗೊಂಬೆಯನ್ನು ಬೆಳ್ಳಿತೆರೆಗೆ ತರೋ ಸನ್ನಾಹದಲ್ಲಿದೆ ಭಗವಾನ್ ಅಂಡ್ ಟೀಂ.