Top

ವಾಚ್ ಪ್ರಕರಣ: ಸಿದ್ದರಾಮಯ್ಯಗೆ ನಿಟ್ಟುಸಿರು

ಸಿಎಂ ಸಿದ್ದರಾಮಯ್ಯ ಅವರಿಗೆ ಡಾ.ಗಿರೀಶ್ ಚಂದ್ರ ವರ್ಮಾ ಲಕ್ಷಾಂತರ ರು.ಮೌಲ್ಯದ ‘ಹ್ಯೂಬ್ಲೆಟ್’ ವಾಚ್ ಉಡುಗೊರೆ ನೀಡಿದ್ದಾರೆ ಎನ್ನಲಾದ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ತುರ್ತು ವಿಚಾರಣೆ ಅವಶ್ಯಕತೆ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಅರ್ಜಿದಾರ ಪರ ವಕೀಲರು ವಾದ ಮಂಡಿಸಲು ಮುಂದಾಗುತ್ತಿದ್ದಂತೆ ಹೈಕೋರ್ಟ್ ಮಧ್ಯಪ್ರವೇಶಿಸಿ, ಈ ಅರ್ಜಿ ತುರ್ತು ವಿಚಾರಣೆ ಅವಶ್ಯಕತೆ ಇಲ್ಲವೆಂದು ಕೋರ್ಟ್ ರಜಾಕಾಲ ಮುಗಿದ ನಂತರ ವಿಚಾರಣೆಗೆ ನಿಗದಿಪಡಿಸಲಾಗಿದೆ.

ಪ್ರಕರಣವನ್ನು ಸಿಬಿಐಗೆ ವಹಿಸಲು ಕೋರಿ ಅನುಪಮ ಶೈಣೆ ಸಲ್ಲಿಸಿರುವ ಅರ್ಜಿಯನ್ನು ಹಲವು ತಿಂಗಳ ಕಳೆದರೂ ಪ್ರಧಾನಿ ಕಚೇರಿ ಇತ್ಯರ್ಥಪಡಿಸಿಲ್ಲ. ಆದ್ದರಿಂದ ತಮ್ಮ ಅರ್ಜಿಯನ್ನು ಕೂಡಲೇ ಇತ್ಯರ್ಥಪಡಿಸಲು ಪ್ರಧಾನಿ ಕಾರ್ಯಾಲಯಕ್ಕೆ ನಿರ್ದೇಶಿಸಬೇಕು ಅಥವಾ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಅರ್ಜಿಯಲ್ಲಿ ಪ್ರಧಾನಿ ಕಚೇರಿಯ ಪ್ರಧಾನ ಕಾರ್ಯದರ್ಶಿ, ಕೇಂದ್ರ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆ, ಪಿಂಚಣಿ ಸಚಿವಾಲಯದ ಅಧೀನ ಕಾರ್ಯದರ್ಶಿ, ಸಿಬಿಐ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಆರ್.ವಿ.ದೇಶಪಾಂಡೆ, ಪ್ರಮೋದ್ ಮಧ್ವರಾಜ್, ರಮೇಶ್ ಕುಮಾರ್, ಐಎಎಸ್ ಅಧಿಕಾರಿ ಡಾ. ಶಾಲಿನಿ ರಜನೀಶ್, ಉದ್ಯಮಿ ಡಾ.ಬಿ.ಆರ್. ಶೆಟ್ಟಿ ಮತ್ತು ಡಾ.ಗಿರೀಶ್ ಚಂದ್ರ ವರ್ಮಾ ಅವರುಗಳನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಉಡುಪಿಯ ಹಾಜಿ ಅಬ್ದುಲ್ ‘ಮಕ್ಕಳು ಮತ್ತು ಹೆರಿಗೆ ಆಸ್ಪತ್ರೆ’ಯನ್ನು ೨೫೦ ಕೋಟಿ ರು. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ನಿರ್ಮಿಸಲು ಹಾಗೂ ೪೭೫ ಕೋಟಿ ರು.ವೆಚ್ಚದಲ್ಲಿ ಜೋಗ ಜಲಪಾತವನ್ನು ಪ್ರವಾಸೋದ್ಯಮ ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರ ಮತ್ತು ಉದ್ಯಮಿ ಬಿ.ಆರ್. ಶೆಟ್ಟಿ ನಡುವೆ ಒಪ್ಪಂದವಾಗಿದೆ. ಇದರಲ್ಲಿ ಮಧ್ಯವರ್ತಿಯಾಗಿದ್ದವರೇ ಡಾ.ಗಿರೀಶ್ ಚಂದ್ರ ವರ್ಮಾ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಡಾ.ಗಿರೀಶ್ ಚಂದ್ರ ವರ್ಮಾ ಕಿಕ್‌ಬ್ಯಾಕ್ ರೂಪದಲ್ಲಿ ಮುಖ್ಯಮಂತ್ರಿಗಳಿಗೆ ಹ್ಯೂಬ್ಲೆಟ್ ವಾಚ್ ಉಡುಗೊರೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

Next Story

RELATED STORIES