Top

ಎಲ್ಲಾ ವಿಭಾಗದಲ್ಲಿ ಎಡವಿದ ಮೋದಿ: ಮನಮೋಹನ್ ಸಿಂಗ್ ಆರೋಪ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಲ್ಲಾ ವಿಭಾಗದಲ್ಲಿ ಎಡವಿದ್ದರಿಂದ ದೇಶದ ಆರ್ಥಿಕತೆ ಹಾಗೂ ಅಭಿವೃದ್ಧಿಯಲ್ಲಿ ಹಿನ್ನಡೆಗೆ ಒಳಗಾಗಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮನಮೋಹನ್ ಸಿಂಗ್​, ನಮ್ಮ ರೈತರು ಸಂಕಷ್ಟದಲ್ಲಿದ್ದಾರೆ. ದೇಶದಲ್ಲಿ‌ ಉದ್ಯೋಗವಿಲ್ಲದೆ ಯುವಜನತೆ ಪರಿತಪಿಸುತ್ತಿದ್ದಾರೆ. ಮೋದಿ ಸರ್ಕಾರ ಇದರ ಬಗ್ಗೆ ಗಮನಹರಿಸಿಲ್ಲ. ದೇಶದ ಆರ್ಥಿಕ ಯೋಜನೆಮೇಲೆ ಹೊಡೆತಬಿದ್ದಿದೆ. ಸಮರ್ಪಕ‌ಯೋಜನೆಗಳನ್ನ‌ ಕಾರ್ಯಗತ ಗೊಳಿಸುತ್ತಿಲ್ಲ. ಇದರಿಂದ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದೆ ಎಂದರು.

ನೋಟ್ ಬ್ಯಾನ್ ನಿಂದ ಜಿಡಿಪಿ ರೇಟಿಂಗ್ ಕುಸಿದಿದೆ. ಜಿಎಸ್ ಟಿಯಿಂದ ಸಣ್ಣ,ಮಧ್ಯಮ ವ್ಯಾಪಾರಿಗಳಿಗೆ ತೊಂದರೆ ಆಗಿದೆ. ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿದಿದ್ದರೂ ಪೆಟ್ರೋಲ್, ಡಿಸೇಲ್ ಬೆಲೆ ಶೇ.100ಕ್ಕಿಂ ಹೆಚ್ಚು ಏರಿಕೆ ಆಗುತ್ತಲೇ ಇದೆ. ಕೇಂದ್ರ ಸರ್ಕಾರ ಪೆಟ್ರೋಲಿಯಂ ದರ ಇಳಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮನಮೋಹನ್ ಸಿಂಗ್ ಆರೋಪಿಸಿದರು.

೨.೫ ಲಕ್ಷ ಕೋಟಿ ಸಾಲ ಕೃಷಿ ಕ್ಷೇತ್ರಕ್ಕೆ ನೀಡಬೇಕಿದೆ. 4 ವರ್ಷಗಳಿಂದ ಪ್ರಧಾನಿ ಮೋದಿ‌ಸರ್ಕಾರ ಏನೂ ಮಾಡಿಲ್ಲ. ರೈತರ ಆಭಿವೃದ್ಧಿಯಲ್ಲಿ ಏನೇನು ಯೋಜನೆ ತಂದಿಲ್ಲ. ಕೃಷಿ ಜಿಡಿಪಿ ದರ ಯುಪಿಎ ಸರ್ಕಾರದಲ್ಲಿ‌ ಹೆಚ್ಚಿತ್ತು. ಆದರೆ ಎನ್ ಡಿಎ ಸರ್ಕಾರದಲ್ಲಿ ೨೧% ಕುಸಿದಿದೆ. ನಮ್ಮ ಅವಧಿಯಲ್ಲಿ ಕೃಷಿ ಲಾಭದಾಯ ಯೋಜನೆಗಳಿದ್ದವು. ಆದರೆ ಈಗ ಕೃಷಿ ಲಾಭದಾಯಕ ಯೋಜನೆಗಳಿಲ್ಲ ಎಂದು ಅವರು ವಿವರಿಸಿದರು.

ದೇಶದಲ್ಲಿ ೪೦% ಜನ ಬಡತನದ ರೇಖೆಯಲ್ಲಿದ್ದಾರೆ. ಇವರ ಅಭಿವೃದ್ಧಿಗೆ ಕೇಂದ್ರ ಗಮನಹರಿಸಿಲ್ಲ. ಬೆಂಗಳೂರು ವಿಶ್ವದ ಡೈನಮಿಕ್ ಸಿಟಿ. ಐಟಿ ರಫ್ತು ಕ್ಷೇತ್ರದಲ್ಲಿ ದೇಶದಲ್ಲಿಯೇ ನಂಬರ್ ವನ್. ಅಮೃತ ಸ್ಮಾರ್ಟ್ ಸಿಟಿ ಯೋಜನೆ ಫಲಪ್ರದವಾಗಿಲ್ಲ. ಬೆಂಗಳೂರು ಟೆಂಡರ್ ಶ್ಯೂರ್ ಯೋಜನೆ ಅತ್ಯುತ್ತಮವಾಗಿದೆ. ಬೆಂಗಳೂರು‌ ನಾಗರಿಕರಿಗೆ ಹೆಚ್ಚಿನ ಒತ್ತು ರಾಜ್ಯ ನೀಡಿದೆ. ದೇಶದ ಸ್ಟಾರ್ಟ್ ಆಪ್ ಕ್ಯಾಪಿಟಲ್ ಬೆಂಗಳೂರು ಆಗಿದೆ. ಗುಜರಾತ್ ಹಿಂದಿಕ್ಕಿದ ಕರ್ನಾಟಕ ಅಭಿವೃದ್ಧಿಯಲ್ಲಿ ಮುಂದಿದೆ ಎಂದು ಸಿಂಗ್ ಹೇಳಿದರು.

ಎಲ್ಲಾ ಕ್ಷೇತ್ರಗಳಲ್ಲಿಯೂ ಬೆಂಗಳೂರು ಮುಂದಿದೆ. ಶಿಕ್ಷಣ,ಆರೋಗ್ಯ ಕ್ಷೇತ್ರದಲ್ಲಿ ಬೆಂಗಳೂರು ಮುಂದಿದೆ. ಬಿಲಿಯನ್ ಡಾಲರ್ಸ್ ಆದಾಯ ಬೆಂಗಳೂರು ತರುತ್ತಿದೆ. ಐಟಿ ರಫ್ತಿನಿಂದ ದೇಶಕ್ಕೆ ಆದಾಯ ತಂದುಕೊಡುತ್ತಿದೆ. ಹೆಚ್ ೧,ಹೆಚ್ ೪ ವೀಸಾ ಬಗ್ಗೆ ಕೇಂದ್ರ ಧ್ವನಿಯೆತ್ತಿಲ್ಲ. ಅಮೆರಿಕಾ ವೀಸಾ ನೀತಿಯನ್ನ‌ ಬಿಗಿಗೊಳಿಸಿದೆ. ಅಮೆರಿಕಾದಲ್ಲಿನ ನಮ್ಮ‌ ಐಟಿ‌ಉದ್ಯೋಗಿಗಳಿಗೆ ಸಂಕಷ್ಟ ತಂದಿದೆ. ಇದರ ಬಗ್ಗೆ ಪ್ರಧಾನಿ ಮೋದಿ ಗಮನಹರಿಸಿಲ್ಲ. ಅಮೆರಿಕಾ ಜೊತೆ ರಾಜತಾಂತ್ರಿಕ ಒಪ್ಪಂದಕ್ಕೂ ಮುಂದಾಗಿಲ್ಲ ಎಂದು ಪ್ರಧಾನಿ‌ ವಿರುದ್ಧ ಮನಮೋಹನ್ ಸಿಂಗ್ ವಾಗ್ದಾಳಿ ನಡೆಸಿದರು.

Next Story

RELATED STORIES