Top

ಮೂರು ಪಕ್ಷಗಳ ತ್ರಿಕೋನ ಸ್ಪರ್ಧೆ ಅಲ್ಲ: ಸಿದ್ದರಾಮಯ್ಯ

ಮುಂಬರುವ ವಿಧಾನಸಭಾ ಚುನಾವಣೆ ಮೂರು ಪಕ್ಷಗಳ ನಡುವಿನ ತ್ರಿಕೋನ ಸ್ಪರ್ಧೆ ಅಲ್ಲ. ಕೆಲವು ಕಡೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಇದ್ದರೆ ಇನ್ನು ಕೆಲವು ಕಡೆ ಕಾಂಗ್ರೆಸ್ ಮತ್ತು ಜೆಡಿಎಸ್​ ನಡುವೆ ಸ್ಪರ್ಧೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಭಾನುವಾರ ಬೆಂಗಳೂರಿನ ಪ್ರೆಸ್ ಕ್ಲಬ್​ನಲ್ಲಿ ಆಯೋಜಿಸಿದ್ದ ಮಾತು-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಈ ಬಾರಿ ಚುನಾವಣೆಯಲ್ಲಿ ಮೋದಿ ಅವರನ್ನು ಅವಲಂಬಿಸಿದ್ದಾರೆ. ಮೋದಿ ಅವರು 7-8 ಬಾರಿ ಪ್ರಚಾರಕ್ಕೆ ಆಗಮಿಸಿದ್ದಾರೆ. ಪ್ರತಿಬಾರಿಯೂ ತಮ್ಮ ಸರಕಾರದ ಸಾಧನೆ ಹೇಳಿಕೊಂಡಿಲ್ಲ. ನಮ್ಮ ಮತ್ತು ಅವರ ಅವರ ಸಾಧನೆ ತುಲನೆ ಮಾಡಬೇಕಿತ್ತು ಎಂದರು.

ಮೋದಿ ಬರೀ ಸುಳ್ಳು ಹೇಳುತ್ತಿದ್ದಾರೆ. ಪೆಟ್ರೋಲ್ ಬೆಲೆ ಸೇರಿದಂತೆ ಹಲವು ಬೆಲೆ ಏರಿಕೆ ತಡೆಯಲು ವಿಫಲರಾಗಿದ್ದಾರೆ. ತಾವು ಸುಸಂಸ್ಕೃತರು ಎಂದು ಬಿಜೆಪಿಯುವರು ಹೇಳಿಕೊಳ್ಳುತ್ತಾರೆ. ಆದರೆ ಅವರು ಕೀಳುಮಟ್ಟದ ಭಾಷೆ ಬಳಸುತ್ತಾರೆ. ಆದರೆ ನಾನೇಂದು ಯಾರ ವಿರುದ್ಧವೂ ಕೀಳುಮಟ್ಟದ ಭಾಷೆ ಬಳಸಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಧಾನಿಯಾಗಿ ಅವರು ಸುಳ್ಳು ಹೇಳುವುದು ವಾಕರಿಕೆ ತರಿಸುತ್ತದೆ. ಸೋನಿಯಾ ಗಾಂಧಿ ವಿರುದ್ಧ ಟೀಕೆ ಮಾಡುತ್ತಾರೆ. ಆದರೆ ಅವರು ಪ್ರಧಾನಿ ಆಗಿರಲೇ ಇಲ್ಲ. ಹಾಗಿದ್ದ ಮೇಲೆ ಮಹದಾಯಿ ವಿಚಾರದಲ್ಲಿ ಸೋನಿಯಾ ಹೆಸರು ಯಾಕೆ ಪ್ರಸ್ತಾಪಿಸಿದರು? ನಾಲ್ಕು ವರ್ಷದಿಂದ ಪ್ರಧಾನಿಯಾಗಿರುವ ಮೋದಿ ಯಾಕೆ ವಿವಾದ ಬಗೆಹರಿಸಲಿಲ್ಲ? ನಾವು ತೆಲಂಗಾಣ ವಿವಾದ ಬಗೆಹರಿಸಲಿಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಇಂದಿರಾ ಕ್ಯಾಂಟಿನ್ ಬಗ್ಗೆ ಬಿಜೆಪಿ ಟೀಕಿಸಿತ್ತು. ಆದರೆ ಈಗ ಅನ್ನಪೂರ್ಣ ಎಂದು ಹೆಸರು ಬದಲಿಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದಾರೆ. ಇದು ನಮ್ಮ ಸಾಧನೆಯ ಕಾಪಿ ಅಲ್ಲವೇ? ಕರಾವಳಿಯನ್ನು ಬಿಜೆಪಿಯವರು ತಮ್ಮ ಕೋಮುಗಲಭೆಯ ಪ್ರಯೋಗಶಾಲೆ ಮಾಡಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

Next Story

RELATED STORIES