Top

ಐಪಿಎಲ್: ಚೆನ್ನೈಗೆ ಚಳ್ಳೆಹಣ್ಣು ತಿನ್ನಿಸಿದ ಗಿಲ್, ಸುನೀಲ್

ಮಧ್ಯಮ ಕ್ರಮಾಂಕದಲ್ಲಿ ಶುಭ್​ಮನ್​ ಗಿಲ್ ಸಿಡಿಸಿದ ಅಜೇಯ ಅರ್ಧಶತಕ ಹಾಗೂ ಸುನೀಲ್ ನಾರಾಯಣ್ ಅವರ ಆಲ್​ರೌಂಡ್ ಪ್ರದರ್ಶನದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6 ವಿಕೆಟ್​ಗಳಿಂದ ಸೋಲಿಸಿತು.

ಕೋಲ್ಕತಾದಲ್ಲಿ ಗುರುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ 20 ಓವರ್ ಗಳಲ್ಲಿ 5 ವಿಕೆಟ್​ಗೆ 174 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ಕೋಲ್ಕತಾ 17,4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಈ ಗೆಲುವಿನೊಂದಿಗೆ ಕೆಕೆಆರ್ 10 ಅಂಕದೊಂದಿಗೆ 3ನೇ ಸ್ಥಾನಕ್ಕೆ ಜಿಗಿದರೆ, ಚೆನ್ನೈ 12 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿತು.

ಕೆಕೆಆರ್ ಒಂದು ಹಂತದಲ್ಲಿ 97 ರನ್​ಗೆ 4 ವಿಕೆಟ್​ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು. ಆದರೆ ದಿನೇಶ್ ಕಾರ್ತಿಕ್ ಮತ್ತು ಶುಭ್​ ಮನ್​ ಗಿಲ್ ಅಜೇಯ ಜೊತೆಯಾಟದಿಂದ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಗಿಲ್ 36 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದ ಅಜೇಯ 57 ರನ್ ಸಿಡಿಸಿದರು. ಕಾರ್ತಿಕ್ 18 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 45 ರನ್ ಚಚ್ಚಿದರು.

ಇದಕ್ಕೂ ಮೊದಲು ಚೆನ್ನೈ ಪರ ಧೋನಿ 43, ಶೇನ್ ವ್ಯಾಟ್ಸನ್ 36 ರನ್ ಬಾರಿಸಿ ತಂಡವನ್ನು ಉತ್ತಮ ಮೊತ್ತದತ್ತ ತಲುಪಿಸಿದರು. ಉತ್ತಮ ಆರಂಭದ ಹೊರತಾಗಿಯೂ ನಿಯಮಿತವಾಗಿ ವಿಕೆಟ್​ ಕಳೆದುಕೊಂಡಿದ್ದರಿಂದ ತಂಡ ಬೃಹತ್ ಮೊತ್ತ ದಾಖಲಿಸುವಲ್ಲಿ ವಿಫಲವಾಯಿತು.

ಸಂಕ್ಷಿಪ್ತ ಸ್ಕೋರ್

ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ 5 ವಿಕೆಟ್​ಗೆ 174 (ಧೋನಿ 43, ವ್ಯಾಟ್ಸನ್ 36, ರೈನಾ 31, ಡು ಪ್ಲೆಸಿಸ್ 27, ಸುನೀಲ್ 20/2, ಪಿಯೂಶ್ ಚಾವ್ಲಾ 35/2).

ಕೋಲ್ಕತಾ ನೈಟ್ ರೈಡರ್ಸ್ 17.4 ಓವರ್ 4 ವಿಕೆಟ್​ 180 (ಗಿಲ್ ಅಜೇಯ 57, ಕಾರ್ತಿಕ್ 45, ಸುನೀಲ್ 32, ಜಡೇಜಾ 39/1, ಹರ್ಭಜನ್ 20/1).

ಪಂದ್ಯಶ್ರೇಷ್ಠ: ಸುನೀಲ್ ನಾರಾಯಣ್.

Next Story

RELATED STORIES