Top

ಮಹಿಳೆ ಕೈಯಲ್ಲಿ ಚಾಕು, ಲೋಕಾಯುಕ್ತ ಕಚೇರಿಯಲ್ಲಿ ತಪ್ಪಿತು ಭಾರೀ ಅನಾಹುತ

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿದ ಪ್ರಕರಣ ಮಾಸುವ ಮುನ್ನವೇ, ಅಂಥದ್ದೇ ಮತ್ತೊಂದು ಘಟನೆ ಲೋಕಾಯುಕ್ತ ಕಚೇರಿಯಲ್ಲೇ ಮರುಕಳಿಸಿದ್ದು,ಆದರೆ ಆ ಪ್ರಯತ್ನ ವಿಫಲವಾಗಿದೆ. ಮತ್ತೆ ಲೋಕಾಯುಕ್ತರನ್ನೇ ಟಾರ್ಗೆಟ್ ಮಾಡಲಾಯ್ತಾ ಎಂಬ ಪ್ರಶ್ನೆಯನ್ನ ಹುಟ್ಟುಹಾಕಿದೆ.

ಕಳೆದ ಮಾರ್ಚ್​​ ತಿಂಗಳದಲ್ಲಿ ಲೋಕಾ ಕಚೇರಿಯ ನ್ಯಾಯಮೂರ್ತಿ ವಿಶ್ವನಾಥ್​ ಶೆಟ್ಟಿ ಮೇಲೆ ಚಾಕು ಇರಿದ ಪ್ರಕರಣ ಇಡೀ ದೇಶವ್ಯಾಪ್ತಿ ಸಂಚಲನ ಸೃಷ್ಟಿಸಿತ್ತು. ಇದೀಗ ಅಂತಹುದೇ ಪ್ರಕರಣ ಮತ್ತೆ ಅದೇ ಲೋಕಾ ಕಚೇರಿಯಲ್ಲಿ ನಡೆದು ಹೋಗಿ ಭಾರೀ ಅನಾಹುತ ತಪ್ಪಿದೆ. ಆದರೆ ಚಾಕು ತಂದಿದ್ದ ಮಹಿಳೆ ಕಚೇರಿಗೆ ಎಂಟ್ರಿ ಕೊಟ್ಟಾಗ ಎಚ್ಚೆತ್ತ ಸಿಬ್ಬಂದಿ ಮಹಿಳೆಯನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ..

ಎಸ್, ಕಳೆದ ಮಾರ್ಚ್ ಏಳರಂದು ಲೋಕಾಯುಕ್ತ ಕಚೇರಿಯಲ್ಲಿ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವ್ರ ಮೇಲೆ ಚಾಕು ಇರಿದ ಪ್ರಕರಣ ಮರೆಯೋ ಮುನ್ನ, ಇಂದು ಮಹಿಳೆಯೊಬ್ಬಳು ಚಾಕುಧಾರಿಯಾಗಿ ಲೋಕಾಯುಕ್ತ ಕಚೇರಿಗೆ ಎಂಟ್ರಿ ಕೊಟ್ಟಿದ್ದಾಳೆ. ಬೆಳಿಗ್ಗೆ ಸುಮಾರು 11 ಗಂಟೆಗೆ ಕಚೇರಿಗೆ ಪ್ರವೇಶಿಸಿದ ಸೋನಿಯಾ ರಾಣಿ ಎಂಬಾಕೆ ತನ್ನೊಂದಿಗೆ ಚಾಕು ತಂದಿದ್ದಳು. ಕಚೇರಿಯ ಮುಖ್ಯದ್ವಾರದ ಬಳಿ ಇರುವ ಮೆಟಲ್ ಡಿಟೆಕ್ಟರ್ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ, ಲೋಕಾಯುಕ್ತ ಕಚೇರಿಯ ಎರಡನೇ ಫ್ಲೋರ್'ಗೆ ತೆರಳಿದ್ದಾಳೆ. ಈ ವೇಳೆ ಎ.ಆರ್.ಓ ಟು ಅವರನ್ನು ನೋಡಬೇಕು ಎಂದು ತಿಳಿಸಿದ ಸೋನಿಯಾಳನ್ನ ಕಚೇರಿಗೆ ಒಳಬಿಡುವ ವೇಳೆ ಅಲ್ಲಿದ್ದ ಮೆಟಲ್ ಡಿಟೆಕ್ಟರ್ ಸದ್ದು‌ಮಾಡಿದೆ. ಇದರಿಂದ ಭದ್ರತಾ ಸಿಬ್ಬಂದಿ ಆಕೆಯನ್ನು ಪರಿಶೀಲಿಸಿದಾಗ ಚಾಕು ಪತ್ತೆಯಾಗಿದ್ದು ವಿಧಾನಸೌಧ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಸೋನಿಯಾ ನಿನ್ನೆಯೇ ಮೈಸೂರಿನಿಂದ ಬೆಂಗಳೂರಿನ ವಿಜಯನಗರಕ್ಕೆ ಬಂದಿದ್ದು, ಲೋಕಾಯುಕ್ತದಲ್ಲಿ ನೀಡಿದ್ದ ತನ್ನ ಹಳೇ ದೂರುಗಳ ಬಗ್ಗೆ ವಿಚಾರಿಸಲು ಬಂದಿದ್ದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.

ಸದ್ಯ ಮಹಿಳೆಯನ್ನ ವಶಕ್ಕೆ ಪಡೆದಿರುವ ವಿಧಾನಸೌಧ ಪೊಲೀಸರು ಡಿಸಿಪಿ ಚಂದ್ರಗುಪ್ತ ನೇತೃತ್ವದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆದ್ರೆ ಆ ಚಾಕು ಯಾವ ಕಾರಣಕ್ಕಾಗಿ ಲೋಕಾಯುಕ್ತ ಕಚೇರಿಗೆ ತಂದಿದ್ದು, ಮತ್ತೆ ಲೋಕಾಯುಕ್ತ ನ್ಯಾಯಮೂರ್ತಿಗಳ ಹತ್ಯೆಗೆ ಯತ್ನಿಸಲಾಗಿತ್ತಾ..? ಈ ಎಲ್ಲಾ ಪ್ರಶ್ನೆಗಳಿಗೆ ಪೊಲೀಸರ ತನಿಖೆಯಿಂದಷ್ಟೇ ಸತ್ಯಾಂಶ ಹೊರ ಬರಬೇಕಿದೆ.

Next Story

RELATED STORIES