Top

: ಅನಂತ್ ಕುಮಾರ್ ಹೆಗಡೆ ಪ್ರಾಣಾಪಾಯದಿಂದ ಪಾರು

ಬೆಂಗಾವಲು ವಾಹನಕ್ಕೆ ಲಾರಿ ಡಿಕ್ಕಿ, ಹತ್ಯೆಗೆ ಸಂಚು ಎಂದು ಕೇಂದ್ರ ಸಚಿವ

ಹಾವೇರಿ: ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಮಂಗಳವಾರ ತಡರಾತ್ರಿ ಸಂಭವಿಸಿದ ಅಪಘಾತವೊಂದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅನಂತ್ ಕುಮಾರ್ ಹೆಗಡೆಯವರು ಶಿರಸಿಯಿಂದ ಬೆಂಗಳೂರಿಗೆ ಸಾಗುತ್ತಿದ್ದ ವೇಳೆ ಹಾವೇರಿ ಜಿಲ್ಲೆಯ ರಾಣೆ ಬೆನ್ನೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಹಲಗೇರಿ ಕ್ರಾಸ್ ಬಳಿ ಲಾರಿಯೊಂದು ಸಚಿವರ ಬೆಂಗಾವಲು ವಾಹನಕ್ಕೆ ಡಿಕ್ಕೆ ಹೊಡೆದಿದೆ. ಸಚಿವರ ಕಾರು 140 ಕಿ.ಮೀ ವೇಗದಲ್ಲಿದ್ದು, ಕೂದಲೆಳೆ ಅಂತರದಲ್ಲಿ ಮುಂದೆ ಹೋದ ಕಾರಣ ಹಿಂದೆ ಬರುತ್ತಿದ್ದ ಬೆಂಗಾವಲು ವಾಹನಕ್ಕೆ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಅನಂತ್ ಕುಮಾರ್ ಹೆಗಡೆಯವರು ಪ್ರಾಣಾಪಾಯದಿಂದ ಪಾರಾಗಿದ್ದು, ಅನಂತ್ ಕುಮಾರ್ ಅವರ ಬೆಂಗಾವಲು ವಾಹನದಲ್ಲಿದ್ದ ಸಿಬ್ಬಂದಿಯೋರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಘಟನೆ ಬೆನ್ನಲ್ಲೇ ಹೆಗಡೆಯವರು ಸರಣಿ ಟ್ವೀಟ್ ಮಾಡಿದ್ದು, ಅದರಲ್ಲಿ ಲಾರಿ ಚಾಲಕನ ಗುರಿ ನನ್ನ ಕಾರೇ ಆಗಿತ್ತು ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.

ಇದು ನನ್ನ ಹತ್ಯೆ ಉದ್ದೇಶಪೂರ್ವಕವಾಗಿ ನಡೆದ ಯತ್ನದಂತೆ ಕಾಣುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ನನ್ನು ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಮೇಲ್ನೋಟಕ್ಕೆ ಆ ಲಾರಿಯ ಗುರಿ ನನ್ನ ಕಾರೇ ಆಗಿತ್ತು. ವಿರುದ್ಧ ದಿಕ್ಕಿನಲ್ಲಿ ರಸ್ತೆಗೆ ಅಡ್ಡಲಾಗಿ ನಿಲ್ಲಿಸಲಾಗಿದ್ದ ಲಾರಿಯು ಏಕಾಏಕಿ ವೇಗವಾಗಿ ಚಲಿಸಲಾರಂಭಿಸಿತು. ಆದರೆ, ನನ್ನ ಕಾರು ವೇಗವಾಗಿದ್ದ ಕಾರಣ ಲಾರಿ ಡಿಕ್ಕಿ ಹೊಡೆಯುವುದರಿಂದ ಪಾರಾಯಿತು. ಆದರೆ, ಹಿಂದೆ ಬರುತ್ತಿದ್ದ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆಯಿತು. ಘಟನೆ ನಂತರ ಲಾರಿ ಚಾಲಕನನ್ನು ಸ್ಥಳೀಯರೇ ವಶಕ್ಕೆ ಪಡೆದುಕೊಂಡಿದ್ದಾರೆ. ಆದನ ಹೆಸರು ನಾಸಿರ್ ಎಂದು ತಿಳಿದುಬಂದಿದೆ.

ಆತ ಮದ್ಯ ಸೇವಿಸಿದಂತೆ ಅನಿಸಲಿಲ್ಲ. ಘಟನೆಯಲ್ಲಿ ಬೆಂಗಾವಲು ವಾಹನದ ಸಿಬ್ಬಂದಿಯ ಭುಜದ ಮೂಳೆ ಮುರಿದಿದೆ. ಎಂದು ಅನಂತ್ ಕುಮಾರ್ ಹೆಗಡೆ ಸರಣಿ ಟ್ವೀಟ್ ಮಾಡಿದ್ದಾರೆ.

ಅಲ್ಲದೆ. ಚಿಕ್ಕಮಗಳೂರಿನ ಲಾರಿಯು ಹೆದ್ದಾರಿ ಬೆಂಗಾವಲು ವಾಹನಕ್ಕೆ ಡಿಕ್ಕೆ ಹೊಡೆದ ದೃಶ್ಯ ಹಾಗೂ ಲಾರಿ ಚಾಲಕನ ಚಿತ್ರಗಳನ್ನೂ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು, ಲಾರಿ ಚಾಲಕನಿಂದ ಸತ್ಯ ಬಾಯಿಬಿಡಿಸಬೇಕು. ಈ ಅಪಘಾತದ ಹಿಂದೆ ಭಾರೀ ಷಡ್ಯಂತ್ರವಿರುವ ಅನುಮಾನ ಇದೆ. ಪೊಲೀಸರು ಸತ್ಯ ಹೊರತೆಗೆಯುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.ಈ ನಡುವೆ ಸ್ಥಳಕ್ಕಾಗಮಿಸಿರುವ ಹಲಗೇರಿ ಪೊಲೀಸರು ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Next Story

RELATED STORIES